ಸ್ನೇಹಕೊಂದು ಸವಾಲ್!
ಇಂದು ಸ್ನೇಹಿತರ ದಿನಾಚರಣೆ!
ಪ್ರೀತಿಗೆ, ಸ್ನೇಹಕ್ಕೆ, ಅಪ್ಪ ಅಮ್ಮನ ವಾತ್ಸಲ್ಯಕ್ಕೆ ಒಂದು ದಿನವನ್ನು ನಿಗದಿಪಡಿಸುವುದು ಸೋಜಿಗವೇ ಸರಿ. ಅಂತಾರಾಷ್ಟ್ರೀಯವಾಗಿ ಈ ದಿನಗಳನ್ನೂ ಮಾರುಕಟ್ಟೆಯ ತಂತ್ರಗಳನ್ನಾಗಿ ಬಳಸಿಕೊಳ್ಳಲಾಗುತ್ತದೆ.
ತಮ್ಮ ಪ್ರೇಯಸಿಗೆ, ಬಾಳ ಸಂಗಾತಿಗೆ ಏನನ್ನೂ ನೀಡದೇ ಪ್ರಪೋಸ್ ಮಾಡುವುದು ಎಷ್ಟು ಸರಿ? ತಮ್ಮ ತಂದೆ ತಾಯಂದಿರ ದಿನವನ್ನು ಉಡುಗೊರೆ ನೀಡದೆ ಆಚರಿಸುವುದು ತಪ್ಪಲ್ಲವೇ? ಹಾಗಾಗಿ ಇಂತಹ ದಿನಗಳಿಗೂ ಒಂದು ಮಾರುಕಟ್ಟೆ ಇದೆ.
ಸ್ನೇಹಿತರಿಂದ ಮೇಲೆ ಸ್ನೇಹಿತರ ಬ್ಯಾಂಡ್ ಕಟ್ಟಿ ಆಚರಿಸೋಣ. ಅಥವಾ ಕನಿಷ್ಠ ವಾಟ್ಸಾಪ್ ನಲ್ಲಿ ಶುಭಾಶಯವನ್ನಾದರೂ ಹೇಳಿ ಕೈತೊಳೆದುಕೊಳ್ಳೋಣ ಅನ್ನುವ ಕಾಲ ನಮ್ಮದು.
ನನ್ನ ಹಲವು ಸ್ನೇಹಿತರುಗಳಲ್ಲಿ ಕೆಲವರ ಜೊತೆ ನಿಷ್ಠುರ ಮಾಡಿಕೊಂಡು ದೂರವಾದರೂ, ಯಾರ ಜೊತೆಯೂ ದ್ವೇಷವನ್ನು ಕಟ್ಟಿಕೊಂಡಿಲ್ಲ. ನಾನು ಅಪೇಕ್ಷಿಸುತ್ತಿರುವ ಸ್ನೇಹಿತನ ಜವಾಬ್ದಾರಿಯನ್ನು ಆ ವ್ಯಕ್ತಿ ಪಾಲಿಸುತ್ತಿಲ್ಲವೆಂದಾದರೆ, ನನಗರಿವಿಲ್ಲದಂತೆ ಬಿರುಕು ಉಂಟಾಗುತ್ತದೆ. ಕೊನೆಗೆ ನಮ್ಮ ನಡುವೆ ಮನಸ್ತಾಪ ಉಂಟಾಗುವಂತೆ ನಾನೇನು ಮಾಡಿದ್ದೇನೆ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ.
ನನ್ನ ವಿದ್ಯಾರ್ಥಿ ಜೀವನದಲ್ಲಿ ನಾನು ಬೇರೆ ಬೇರೆ ಊರುಗಳ ಶಾಲಾ ಕಾಲೇಜುಗಳಿಗೆ ಹೋಗಿರುವುದರಿಂದ ಸದಾ ಸಂಪರ್ಕದಲ್ಲಿರುವ ಶಾಶ್ವತ ಸ್ನೇಹಿತರು ನನಗಿಲ್ಲ. ನನ್ನ Friends Forever ವಾಟ್ಸಾಪ್ ಗ್ರೂಪುಗಳಲ್ಲಿ, ಫೋನ್ ನಂಬರುಗಳಲ್ಲಿ ಮಾತ್ರ ಶಾಶ್ವತ!
ಒಂದು ಕಾಲದಲ್ಲಿ ನನ್ನಿಂದ ಅತ್ಯಮೂಲ್ಯವಾದ ನೆರವನ್ನು ಪಡೆದವರೂ ಕಾಲಾಂತರದಲ್ಲಿ ಸಮಯದ ಅಭಾವದಿಂದಲೋ ಅಥವಾ ಅವರ ಸಂಸಾರದ ತಾಪತ್ರಯದಿಂದಲೂ ಸಂಪರ್ಕ ಕಡಿದುಕೊಳ್ಳುತ್ತಾರೆ. ಹೋಗಲಿ, ನಾನೇ ಒಮ್ಮೆ ಕರೆ ಮಾಡಿ ಮಾತನಾಡುತ್ತೇನೆ ಎಂದು ಪ್ರಯತ್ನಿಸಿದರೂ ನನ್ನ ಕರೆಯನ್ನೂ ಸ್ವೀಕರಿಸದೆ ಮುಂದೆ ಮರಳಿ ನನಗೆ ಕರೆ ಮಾಡದೆ ತಮ್ಮ ಬದುಕಿನ ಆದ್ಯತೆಯ ಪಾಠವನ್ನು ಮಾತನಾಡದೇ ನನಗೆ ಹೇಳಿ ಕೊಡುತ್ತಾರೆ.
ಅನೇಕ ಸಂದರ್ಭಗಳಲ್ಲಿ ನನ್ನಿಂದ ನೆರವನ್ನು ಪಡೆದವರು, ಎದುರಿನಲ್ಲಿ ಚೆನ್ನಾಗಿ ಇರುವವರೂ ನನ್ನನ್ನು ದ್ವೇಷಿಸುತ್ತಾರೆ ಎಂದು ಮೊದಲ ಬಾರಿ ತಿಳಿದಾಗ ಆಘಾತವಾಗಿತ್ತು. ನನ್ನಿಂದ ಸಾಲ ಪಡೆದವರೂ ನನ್ನ ಬೆನ್ನ ಹಿಂದೆ ನನ್ನನ್ನು ಟೀಕಿಸುತ್ತಿದ್ದರು. ಆಗ ನನ್ನ ವ್ಯಕ್ತಿತ್ವ ದೋಷ ನನಗೆ ಅರಿವಾಗಿರಲಿಲ್ಲ. ಕೆಲವೊಮ್ಮೆ ನಮ್ಮನ್ನು ನಾವು ಅರಿತುಕೊಳ್ಳಲು ಅರ್ಧ ಆಯುಷ್ಯವೇ ಕಳೆದು ಹೋಗುತ್ತದೆ.
ಇಂಗ್ಲೀಷ್ ನಲ್ಲಿ A Friend In Need Is A Friend Indeed ಅನ್ನುವ ಮಾತಿದೆ. ನಮ್ಮ ಅಗತ್ಯಕ್ಕೆ ಒದಗುವವನೇ ನಿಜವಾದ ಸ್ನೇಹಿತ. ಇದು ಕೇವಲ ಪ್ರಾಪಂಚಿಕವಾಗಿ ಅಷ್ಟೇ ಅಲ್ಲ. ಭಾವನಾತ್ಮಕವಾಗಿ ಕೂಡ ಸತ್ಯ.
ಕೆಲವರು ಪ್ರಾಪಂಚಿಕವಾಗಿ ತಮ್ಮ ಸ್ನೇಹಿತರಿಗೆ ನೆರವನ್ನು ಒದಗಿಸಲು ಹಿಂಜರಿಯುವುದಿಲ್ಲ. ಆದರೆ ಅದಕ್ಕೆ ಪ್ರತಿಯಾಗಿ ಭಾವನಾತ್ಮಕವಾಗಿ ಆ ಸ್ನೇಹಿತರು ಒದಗಬೇಕೆಂದು ಬಯಸುತ್ತಾರೆ. ಒಂದೊಮ್ಮೆ ಆ ನಿರೀಕ್ಷೆಗಳು ಕೈಗೂಡಲಿಲ್ಲವೆಂದಾದರೆ ಮನಸ್ತಾಪ ಉಂಟಾಗುತ್ತದೆ.
ಪ್ರತಿ ಸಂಬಂಧದಲ್ಲೂ ಪ್ರೀತಿಯ ನಿರೀಕ್ಷೆ ಇರುತ್ತದೆ. ಆದರೆ ಅದನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಲಾಗುತ್ತದೆ. ಈ ಪ್ರೀತಿಯ ಭಾಷೆಯನ್ನು ಮುಖ್ಯವಾಗಿ ಪ್ರೇಮ ಸಂಬಂಧದಲ್ಲಿ ಮತ್ತು ಹೆತ್ತವರು ಮತ್ತು ಮಕ್ಕಳ ಸಂಬಂಧದ ಕುರಿತು ಉಲ್ಲೇಖಿಸಿದರೂ ಎಲ್ಲಾ ಸಂಬಂಧಗಳಿಗೂ ಇದು ಅನ್ವಯವಾಗುತ್ತದೆ.
ಪ್ರೀತಿಯ ಭಾಷೆಗಳನ್ನು ಮುಖ್ಯವಾಗಿ ಐದು ಭಾಗಗಳಾಗಿ ವಿಂಗಡಿಸಲಾಗಿದೆ.
ಮೊದಲನೆಯದು, ಒಂದು ಒಳ್ಳೆಯ ಮಾತು.
ಕೆಲವರಿಗೆ ಮಾತು ಪ್ರೇರೇಪಣೆಯನ್ನು ನೀಡುತ್ತದೆ. ಸಂದರ್ಭಕ್ಕನುಗುಣವಾಗಿ ಅದು ಸಮಾಧಾನದ ಮಾತಾಗಿರಬಹುದು, ಅಥವಾ ಹುರಿದುಂಬಿಸುವ ಮಾತಾಗಿರಬಹುದು, ಹಾಗೆಯೇ ಮೆಚ್ಚುಗೆಯ ಮಾತಾಗಿರಬಹುದು. ಈ ರೀತಿಯಾಗಿ ಮಾತನಾಡಲು ಯಾರಾದರೂ ವ್ಯಕ್ತಿ ಅವರಿಗೆ ಸಿಕ್ಕಲ್ಲಿ ಆ ವ್ಯಕ್ತಿಯ ಹೃದಯ ತುಂಬಿ ಬರಬಹುದು.
ಎರಡನೆಯದು ವೈಯುಕ್ತಿಕ ಸಮಯ.
ನಾನೀಗಾಗಲೇ ಹೇಳಿದಂತೆ, ಕೆಲವು ಸ್ನೇಹಿತರು ಕೆರೆಯನ್ನು ಸ್ವೀಕರಿಸುವುದಿಲ್ಲ. ಹಾಗೆಯೇ ಮರಳಿ ಕರೆ ಮಾಡುವುದಿಲ್ಲ. ಈ ವರ್ತನೆ, ಆ ವ್ಯಕ್ತಿ ನನಗೆ ಸಮಯ ನೀಡುವುದಿಲ್ಲ ಅನ್ನುವ ಸಂದೇಶ ನೀಡುತ್ತದೆ. ಈ ಕರೆಯ ನಿರಾಕರಣೆ ತನ್ನನ್ನೇ ನಿರಾಕರಿಸಿದಷ್ಟು ಬೇಸರವನ್ನುಂಟುಮಾಡುತ್ತದೆ. ವೈಯುಕ್ತಿಕವಾಗಿ ಒದಗಿ ಬರುವುದೋ ಅಥವಾ ಕರೆಗೆ ಉತ್ತರಿಸುವುದನ್ನು ಮಾಡಿದಾಗ ಆ ವ್ಯಕ್ತಿಯ ಪ್ರೀತಿಯ ಕೊಡ ತುಂಬುತ್ತದೆ.
ಮೂರನೆಯದು ಸ್ಪರ್ಶ.
ಇದು ಸ್ನೇಹ ಸಂಬಂಧದಲ್ಲಿ ಹೆಚ್ಚು ಬಳಕೆಯಾಗುವುದಿಲ್ಲ. ಆದರೆ ಕೆಲವರು ಇದನ್ನೂ ನಿರೀಕ್ಷೆ ಮಾಡುತ್ತಾರೆ. ಕೆಲವು ಸ್ನೇಹಿತರು ಪ್ರತಿ ಬಾರಿ ಸಿಕ್ಕಾಗಲೂ ಪರಸ್ಪರ ಆಲಿಂಗಿಸಿಕೊಳ್ಳುವುದು ಸ್ಪರ್ಶವನ್ನು ನಿರೀಕ್ಷಿಸುವ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ ಕೆಲವರಿಗೆ ಇದು ಹಿಡಿಸುವುದಿಲ್ಲ. ಕೈ ಕುಲುಕುವುದು, ಭುಜ, ತಲೆಯನ್ನು ಸ್ಪರ್ಶಿಸುವುದು, ಬೆನ್ನು ನೇವರಿಸುವುದು ಮುಂತಾದವು ಸ್ಪರ್ಶವನ್ನು ವ್ಯಕ್ತಪಡಿಸುತ್ತದೆ.
ನಾಲ್ಕನೆಯದು ಉಡುಗೊರೆ.
ಕೆಲವರು ತಮ್ಮ ಹುಟ್ಟು ಹಬ್ಬದ ದಿನ ತನ್ನ ಎಲ್ಲಾ ಸ್ನೇಹಿತರು ಶುಭಾಶಯವನ್ನು ವ್ಯಕ್ತಪಡಿಸಬೇಕೆಂದು ಬಯಸಿದರೆ, ಅವರು ಒಳ್ಳೆಯ ಮಾತನ್ನು ನಿರೀಕ್ಷಿಸುತ್ತಾರೆ ಎಂದರ್ಥ. ಕೆಲವರು ಅಷ್ಟಕ್ಕೆ ಸಮಾಧಾನವಾಗದೆ, ಸ್ನೇಹಿತರು ಬಳಿ ಬಂದು ಕೈ ಕುಲುಕಿ, ಆಲಂಗಿಸಿ ಶುಭಾಶಯ ವ್ಯಕ್ತಪಡಿಸಬೇಕೆಂದು ನಿರೀಕ್ಷಿಸುತ್ತಾರೆ. ಇವರು ಸ್ಪರ್ಶದ ಮೂಲಕ ಪ್ರೀತಿಯನ್ನು ಬಯಸುವ ವರ್ಗದವರು. ಇನ್ನು ಕೆಲವರು, ತಮ್ಮ ಸ್ನೇಹಿತರು ತಮ್ಮ ಮನೆಗೆ ಕೇಕ್ ತಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಬೇಕು, ತನಗೆ ಉಡುಗೊರೆ ನೀಡಬೇಕು ಎಂದು ಬಯಸುವವರು. ಇವರು ಪ್ರೀತಿಯನ್ನು ಉಡುಗೊರೆಯ ಮೂಲಕ ನಿರೀಕ್ಷಿಸುತ್ತಾರೆ. ಉಡುಗೊರೆಯ ಮೌಲ್ಯ ದೊಡ್ಡದಾಗಿರಲೇಬೇಕೆಂದಿಲ್ಲ. ಯಾವುದೇ ಸಣ್ಣ ಉಡುಗೊರೆಯಾದರೂ, ಅದನ್ನು ಸುಂದರವಾಗಿ ಪ್ಯಾಕ್ ಮಾಡಿ ಕೊಟ್ಟರೂ ಖುಷಿ ಪಡುತ್ತಾರೆ.
ಐದನೆಯದು ಸೇವೆ.
ತನಗೋಸ್ಕರ ಯಾರಾದರೂ ನೆರವನ್ನು ಒದಗಿಸಿದರೆ ಸೇವೆಯನ್ನು ಬಯಸುವ ವ್ಯಕ್ತಿಗಳು ಸಂತೋಷ ಮಾಡುತ್ತಾರೆ. ಅವರನ್ನು ಎಲ್ಲಿಯಾದರೂ ಡ್ರಾಪ್ ಮಾಡುವುದಾಗಿರಬಹುದು, ಅವರ ಬಟ್ಟೆಗಳನ್ನು ಪ್ಯಾಕ್ ಮಾಡುವುದಕ್ಕೆ ಸಹಾಯ ಮಾಡುವುದು, ಅವರಿಗಾಗಿ ಏನಾದರೂ ವಸ್ತುಗಳನ್ನು ತಂದು ಕೊಡುವುದು ಮುಂತಾದ ಕೆಲಸಗಳನ್ನು ಮಾಡಿದರೆ ಅವರ ದಿಲ್ ಕುಶ್.
ಈ ಐದು ಪ್ರೀತಿಯ ಭಾಷೆಗಳಲ್ಲಿ ಎಲ್ಲರೂ ಎಲ್ಲವನ್ನೂ ನಿರೀಕ್ಷೆ ಮಾಡುವುದಿಲ್ಲ. ಪ್ರತಿಯೊಬ್ಬರಿಗೂ, ಒಂದು ಪ್ರಾಥಮಿಕ ಭಾಷೆ ಮತ್ತು ಇನ್ನೊಂದು ದ್ವಿತೀಯ ಭಾಷೆ ಇರುತ್ತದೆ. ಉದಾಹರಣೆಗೆ, ನನ್ನ ಪ್ರಾಥಮಿಕ ಭಾಷೆ ಒಂದು ಒಳ್ಳೆಯ ಮಾತು ಆದರೆ, ದ್ವಿತೀಯ ಭಾಷೆ ವೈಯುಕ್ತಿಕ ಸಮಯ. ಈ ಎರಡೂ ಪ್ರೀತಿಯ ಭಾಷೆಗಳು ಒಂದಕ್ಕೊಂದು ಪೂರಕವಾಗಿದೆ. ನಾನು ಬಯಸುವ ವ್ಯಕ್ತಿ ಯಾರಾದರೂ ನನಗೆ ಸಮಯ ನೀಡಿ ನನ್ನೊಂದಿಗೆ ಮಾತನಾಡುತ್ತಿದ್ದರೆ ನನ್ನ ಹೃದಯ ತುಂಬಿ ಬರುತ್ತದೆ. ಪ್ರತಿಯೊಬ್ಬರ ಎರಡು ಪ್ರೀತಿಯ ಭಾಷೆಗಳೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತದೆ. ಹಾಗಂತ ಅದು ಆಗಿರಲೇಬೇಕೆಂದಿಲ್ಲ.
ವೈಯುಕ್ತಿಕ ಸಮಯ ಮತ್ತು ಉಡುಗೊರೆಯನ್ನು ನಿರೀಕ್ಷಿಸುವವರು, ತಮ್ಮ ಹುಟ್ಟು ಹಬ್ಬದ ದಿನ ಸ್ನೇಹಿತರು ಮನೆಗೆ ಬಂದು ಉಡುಗೊರೆ ನೀಡಬೇಕೆಂದು ಬಯಸುತ್ತಾರೆ. ವೈಯುಕ್ತಿಕ ಸಮಯ ಮತ್ತು ಸೇವೆಯನ್ನು ನಿರೀಕ್ಷಿಸುವವರು ತಮ್ಮ ಸ್ನೇಹಿತರು ತಮ್ಮ ಸಮಯವನ್ನು ತಮಗಾಗಿ ಮೀಸಲಿಟ್ಟು ಕೆಲಸವನ್ನು ಮಾಡಬೇಕೆಂದು ನಿರೀಕ್ಷಿಸುತ್ತಾರೆ.
ಹೀಗೆ ಪ್ರಾಥಮಿಕ ಭಾಷೆ ಮತ್ತು ದ್ವಿತೀಯ ಭಾಷೆ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತದೆ.
ದಿನಾಚರಣೆಯನ್ನು ಸಂದೇಶ ಕಳುಹಿಸಿ ಆಚರಿಸುವುದರ ಜೊತೆಗೆ ತಮ್ಮ ಸ್ನೇಹಿತರ ಪ್ರೀತಿಯ ಭಾಷೆಯನ್ನು ಅರಿತುಕೊಳ್ಳುವುದರ ಮೂಲಕ ಈ ಸ್ನೇಹಿತರ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣವಲ್ಲವೇ?




Comments
Post a Comment