ಪೂರ್ವಜನ್ಮ ಪ್ರತ್ಯಾವರ್ತನ ಚಿಕಿತ್ಸಾ ತರಬೇತಿ ಶಿಬಿರ. ಒಂದು ಅವಿಸ್ಮರಣೀಯ ಸತ್ಸಂಗ

 

ಅಂತಾರಾಷ್ಟ್ರೀಯ ಖ್ಯಾತಿಯ ಡಾ ಶ್ರೀ ರಾಮಚಂದ್ರ ಗುರೂಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಹತ್ತು ದಿನಗಳ ಕಾಲ ನಡೆದ "ಪೂರ್ವಜನ್ಮ ಪ್ರತ್ಯವರ್ತನ ಚಿಕಿತ್ಸಾ" ಶಿಬಿರ ಎಂದೆಂದಿಗೂ ಮಾಸದ ಒಂದು ಅವಿಸ್ಮರಣೀಯ ಅನುಭವ.


ಸುಮಾರು ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದು ಅವರೆಲ್ಲರೂ ಸ್ವಯಂಚಿಕಿತ್ಸಕರಾಗಿ ಅಷ್ಟೇ ಅಲ್ಲದೆ ಗುರುಗಳ ಕಾರುಣ್ಯದಿಂದ ಇತರರಿಗೂ ಚಿಕಿತ್ಸೆ ಮಾಡುವ ಚಿಕಿತ್ಸಕ ಕೈಗಳನ್ನು ಪಡೆದಿರುತ್ತಾರೆ.

ಏನಿದು ಪೂರ್ವಜನ್ಮ ಪ್ರತ್ಯಾವರ್ತನ ?

ವ್ಯಕ್ತಿಯೊಬ್ಬ ವ್ಯಕ್ತಿಯೂ ತಾನು ಅನುಭವಿಸುವ ಕಷ್ಟ ಅಥವಾ ಸುಖಗಳ ಮೂಲ ಭೂತಕಾಲದಲ್ಲಡಗಿದೆ. ಉದಾಹರಣೆಗೆ ನಾವು ಇಂದು ತಿನ್ನುವ ಆಹಾರ ಭವಿಷ್ಯದಲ್ಲಿ ನಮ್ಮ ದೇಹದ ಮೇಲೆ ಪರಿಣಾಮ ಬೀಳುತ್ತದೆ. ನಮ್ಮ ಆಹಾರ ಉತ್ತಮವಾಗಿದ್ದರೆ ಆರೋಗ್ಯವಂತರಾಗುತ್ತೇವೆ. ಒಂದು ವೇಳೆ ಗುಣಮಟ್ಟರಹಿತ ಆಹಾರವಾಗಿದ್ದರೆ ಅನಾರೋಗ್ಯಕ್ಕೊಳಪಡುತ್ತೇವೆ. ಇದು ಕೇವಲ ಆಹಾರದ ವಿಷಯದಲ್ಲಿ ಅಲ್ಲದೆ ನಮ್ಮ ಆಲೋಚನೆ, ನಮ್ಮ ನಡತೆಗಳೂ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ನಾವು ಕರ್ಮ ಫಲ ಎನ್ನುತ್ತೇನೆ.

ನಾವು ತಿನ್ನುವ ಆಹಾರ ಈ ಜನ್ಮದಲ್ಲೇ ಪರಿಣಾಮವನ್ನು ನೀಡಿದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ ಮುಂದಿನ ಜನ್ಮದಲ್ಲೂ ಪರಿಣಾಮವನ್ನು ನೀಡುತ್ತದೆ. 

ಒಂದಷ್ಟು ಸರಳ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ನೀವು ಹಿಂದಿನ ಜನ್ಮದಲ್ಲಿ ಮಾಡಿದ ಪ್ರಯತ್ನ ಈ ಜನ್ಮದಲ್ಲಿ ಫಲಿಸಬಹುದು. ಹಾಗೆಯೇ ನೀವು ಹಿಂದಿನ ಜನ್ಮದಲ್ಲಿ ಶತ್ರುತ್ವವನ್ನು ಬೆಳೆಸಿಕೊಂಡು ಆ ಭಾವನೆಯನ್ನು ಅಲ್ಲಿಯೇ ಬಿಟ್ಟು ಬಿಡದಿದ್ದರೆ ಮುಂದಿನ ಯಾವುದಾದರೂ ಒಂದು ಜನ್ಮದಲ್ಲಿ ಅದೇ ಆತ್ಮ ಹುಟ್ಟಿ ಬಂದು ಆ ವ್ಯಕ್ತಿಯೊಂದಿಗೆ ಶತ್ರುತ್ವವನ್ನು ಮುಂದುವರೆಸಿಕೊಳ್ಳುವ ಸಂದರ್ಭ ಬರಬಹುದು.

ಈ ಜನ್ಮದ ಸಮಸ್ಯೆಗಳಿಗೆ ನಮ್ಮ ಪೂರ್ವ ಜನ್ಮದ ಕರ್ಮವನ್ನು ಅರಿತುಕೊಂಡು ಅದಕ್ಕೆ ಪ್ರಾಯಶ್ಚಿತ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಪೂರ್ವಜನ್ಮ ಪ್ರತ್ಯಾವರ್ತನ ಚಿಕಿತ್ಸೆ ಎನ್ನುತ್ತೇವೆ.


ಪೂರ್ವ ಜನ್ಮವನ್ನು ಅರಿತುಕೊಳ್ಳುವುದು ಹೇಗೆ?

ನಮ್ಮಲ್ಲಿ ಎರಡು ಪ್ರಜ್ಞಾವಸ್ಥೆ ಇರುತ್ತದೆ. ಮೊದಲನೆಯದು ಜಾಗೃತ ಪ್ರಜ್ಞಾವಸ್ಥೆ, ಇನ್ನೊಂದು ಸುಪ್ತ ಪ್ರಜ್ಞಾವಸ್ಥೆ. ನಮ್ಮ ಜೀವನದ ಎಲ್ಲಾ ಒಳಿತು, ಕೆಡುಕುಗಳಿಗೂ ಸುಪ್ತ ಪ್ರಜ್ಞಾವಸ್ಥೆ ಕಾರಣವಾಗುತ್ತದೆ. ಸುಪ್ತ ಪ್ರಜ್ಞೆಯನ್ನು ಸರಿಯಾಗಿ ಬಳಸಿಕೊಂಡರೆ ಪವಾಡ ಉಂಟಾಗುತ್ತದೆ. ಒಂದು ವೇಳೆ ಅದರ ಕುರಿತು ಯಾವುದೇ ತಿಳುವಳಿಕೆ ಇಲ್ಲವೆಂದಾದರೆ ಜೀವನ ವ್ಯರ್ಥವಾಗುತ್ತದೆ.

ನಮ್ಮೆಲ್ಲಾ ಆಲೋಚನೆ, ವರ್ತನೆಗಳಿಗೆ ಸುಪ್ತ ಮನಸ್ಸು ಕಾರಣವಾಗಿರುತ್ತದೆ. ಆದರೆ ಆ ಸುಪ್ತ ಮನಸ್ಸಿಗೆ ನಮ್ಮ ಜಾಗೃತ ಮನಸ್ಸು ಕಾವಲುಗಾರನಂತೆ ಪಾತ್ರ ನಿರ್ವಹಿಸುತ್ತದೆ. ಒಂದು ವೇಳೆ ನಮ್ಮ ಸುಪ್ತ ಮನಸ್ಸಿಗೆ ನಕಾರಾತ್ಮಕ ಅಂಶಗಳು ನಿರಂತರವಾಗಿ ಹೋಗುತ್ತಿದ್ದರೆ ಸುಪ್ತ ಮನಸ್ಸು ಅದನ್ನೇ ನಿಜವೆಂದು ಭಾವಿಸಿ ಅದರಂತೆ ಜೀವನ ಸಾಗಿಸುತ್ತದೆ.

ಮರಿ ಆನೆಯ ಕಾಲಿಗೆ ಸರಪಳನ್ನು ಕಟ್ಟಿ ಇನ್ನೊಂದು ತುದಿಯನ್ನು ಕಂಭಕ್ಕೆ ಕಟ್ಟಿದಾಗ, ಮರಿ ಆನೆ ಬಂಧನದಿಂದ ಬಿಡಿಸಿಕೊಳ್ಳಲು ಕಾಲನ್ನು ಎಳೆಯುತ್ತದೆ. ಆದರೆ ಆನೆಯ ಪ್ರಯತ್ನ ವಿಫಲವಾಗುವುದಷ್ಟೇ ಅಲ್ಲದೆ ಕಾಲುಗಳು ಗಾಯಗೊಂಡು ವಿಪರೀತ ನೋವನ್ನನುಭವಿಸುತ್ತದೆ. ಮುಂದೆ ಮರಿ ಆನೆ ಬೆಳೆದು ದೊಡ್ಡದಾಗ ತನ್ನ ಶಕ್ತಿಯಿಂದ ಸುಲಭವಾಗಿ ಸರಪಳಿಯಿಂದ ಬಿಡಿಸಿಕೊಳ್ಳಬಹುದಾದರೂ, ಹಿಂದಿನ ನೋವಿನ ಅನುಭವ ಸುಪ್ತ ಮನಸ್ಸಿಗೆ ನಾಟಿ, ಭಯದಿಂದ ಬಂಧನದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ.

ನಮ್ಮ ಮನಸ್ಸು ಕೂಡ ಇದೇ ರೀತಿ ಕಾರ್ಯನಿರ್ವಹಿಸುತ್ತದೆ. ಒಂದು ಅಹಿತಕರ ಅನುಭವದಿಂದ ಪ್ರಯತ್ನವನ್ನು ಮುಂದುವರೆಸಲು ಸುಪ್ತ ಮನಸ್ಸು ಬಿಡುವುದಿಲ್ಲ.

ಪೂರ್ವ ಜನ್ಮವನ್ನು ಅರಿತುಕೊಳ್ಳಬೇಕಾದರೆ ಸುಪ್ತ ಮನಸ್ಸನ್ನು ಜಾಗೃತಿಗೊಳಿಸಬೇಕು. ಇದಕ್ಕೆ ತಾಂತ್ರಿಕವಾಗಿ ಮಗ್ನಾವಸ್ಥೆ (trance) ಎಂದು ಕರೆಯುತ್ತೇವೆ. ಇದಲ್ಲದೆ ಸಮಾಧಿ ಸ್ಥಿತಿ, ಮೋಹಾವಸ್ಥೆ, ಹಿಪ್ನಾಟಿಕ್ ಸ್ಥಿತಿ ಎಂದೂ ಹೇಳಲಾಗುತ್ತದೆ. ಈ ಸ್ಥಿತಿಯನ್ನು ತಲುಪಬೇಕಾದರೆ ತಾರ್ಕಿಕ ಮನಸ್ಸನ್ನು ದಾಟಿರಬೇಕು. ತರ್ಕಬದ್ಧ ಮನಸ್ಸು ಇದನ್ನು ಒಪ್ಪಲು ತಯಾರಿರುವುದಿಲ್ಲ. ಸಾಧಾರಣವಾಗಿ ಶೇಕಡಾ 30% ರಷ್ಟು ಜನ ಆಳವಾದ ಮಗ್ನಾವಸ್ಥೆಗೆ ಜಾರುತ್ತಾರೆ. ಹಿಂದಿನ ಜನ್ಮದ ಕರ್ಮ ವಾಸನೆಯನ್ನು ಶೇಕಡ 80 ಕ್ಕಿಂತ ಹೆಚ್ಚು ಹೊಂದಿದವರಾಗಿದ್ದರೆ ಸುಲಭವಾಗಿ ಟ್ರಾನ್ಸ್ ಸ್ಥಿತಿಗೆ ಹೋಗುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಸಾಧನೆಯ ಮೂಲಕ ಈ ಸ್ಥಿತಿಯನ್ನು ಹೊಂದಲು ಸಾಧ್ಯವಿದೆ.

ಆಳವಾದ ಟ್ರಾನ್ಸ್ ಸ್ಥಿತಿಯನ್ನು ತಲುಪಿದ ವ್ಯಕ್ತಿಗೆ ತನ್ನ ಸುಪ್ತ ಮನಸ್ಸನ್ನು ಬ್ರಹ್ಮಾಂಡದ ಜೊತೆ ಸಂಪರ್ಕ ಸಾಧಿಸುವುದರ ಮೂಲಕ ತನ್ನ ಪೂರ್ವ ಜನ್ಮವನ್ನು ಭವಿಷ್ಯವನ್ನು ತಿಳಿದುಕೊಳ್ಳಬಹುದು.

ಈ ಜನ್ಮದ ಬಾಲ್ಯಾವಸ್ಥೆಯಲ್ಲಿ ಆದ ಅನುಭವದಿಂದ ವ್ಯಕ್ತಿಯೊಬ್ಬ ಮನೋಘಾತ (trauma) ವನ್ನು ಅನುಭವಿಸುತ್ತಿದ್ದರೆ, ಲಘುವಾದ ಟ್ರಾನ್ಸ್ ಗೆ ತೆರಳಿದರೂ ಕೂಡ ಹಿಪ್ನೊಥೆರಪಿ ಮೂಲಕ ಸುಪ್ತ ಮನಸ್ಸಿಗೆ ಧನಾತ್ಮಕ ಅಂಶಗಳನ್ನು ಬಿತ್ತಿ ಚಿಕಿತ್ಸೆ ನೀಡಬಹುದು. ಪೂರ್ವ ಜನ್ಮದ ಕರ್ಮಗಳು ಈ ಜನ್ಮದ ಮೇಲೆ ಪ್ರಭಾವ ಬೀರುತ್ತಿದ್ದರೆ ಆಳವಾದ ಟ್ರಾನ್ಸ್ ಗೆ ವ್ಯಕ್ತಿಯನ್ನು ಕಳಿಸಿ ಆ ಸ್ಥಿತಿಗೆ ಏನು ಕಾರಣ ಎಂದು ಅರಿತು ಸೂಕ್ತ ಪರಿಹಾರ ಕಂಡುಕೊಳ್ಳಬಹುದು.

ಆತ್ಮಗಳ ಸೇಡು

ಕೆಲವೊಮ್ಮೆ ಹಿಂದಿನ ಜನ್ಮದ ಸೇಡನ್ನು ತೀರಿಸಿಕೊಳ್ಳಲು ಅತೃಪ್ತ ಆತ್ಮಗಳು ಮನುಷ್ಯ ದೇಹವನ್ನು ಸೇರಿ ಕಿರುಕುಳ ಕೊಡಲಾರಂಭಿಸುತ್ತವೆ. ಹಾಗೆಯೇ ಈ ಜನ್ಮದಲ್ಲಿ ಶತ್ರುಗಳು ಹಗೆಯನ್ನು ಸಾಧಿಸಲು ಮಂತ್ರವಾದಿಗಳ ಮೂಲಕ ಆತ್ಮವನ್ನು ದೇಹಕ್ಕೆ ಕಳಿಸುತ್ತಾರೆ. ತಾಂತ್ರಿಕ ಭಾಷೆಯಲ್ಲಿ ಇದನ್ನು ಮಾಟ ಎಂದು ಹೇಳಲಾಗುತ್ತದೆ. ಅತೃಪ್ತ ಆತ್ಮಗಳ ಇರುವಿಕೆಯನ್ನು ಸುಪ್ತ ಮನಸ್ಸು ಜಾಗೃತವಾದಾಗ ಖಚಿತಪಡಿಸಿಕೊಳ್ಳಬಹುದು. ಹಾಗೆಯೇ ಚಿಕಿತ್ಸಕನು ಆತ್ಮದ ಜೊತೆ ಮಾತುಕತೆ ನಡೆಸಿ ದೇಹದಿಂದ ವಿಮುಕ್ತಿ ನೀಡಲು ಸಾಧ್ಯವಿದೆ.

ಸ್ವಯಂ ಸಾಧನೆ ಮತ್ತು ಚಿಕಿತ್ಸೆ

ಹತ್ತು ದಿನಗಳ ಈ ಶಿಬಿರದಲ್ಲಿ ಗುರುಗಳು ನಮಗೆ ಪೂರ್ವ ಜನ್ಮ ಪ್ರತ್ಯಾವರ್ತನ ಚಿಕಿತ್ಸೆ ಮತ್ತು ಭವಿಷ್ಯ ದರ್ಪಣವನ್ನು ಅನೇಕ ಜೀವಂತ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿ ಕೊಟ್ಟಿದ್ದಲ್ಲದೆ ಅದನ್ನು ಅಳವಡಿಕೊಳ್ಳುವ ವಿಧಾನವನ್ನು ಕೂಡ ಹೇಳಿ ಕೊಟ್ಟಿದ್ದರು. ಅದೇ ರೀತಿ ವಿವಿಧ ಸರಳ ಚಿಕಿತ್ಸಾ ವಿಧಾನಗಳನ್ನು ಹೇಳಿ ಕೊಟ್ಟಿದ್ದರು. ಕೊನೆಯ ದಿನ ಮುಂಜಾನೆ ನಾಲ್ಕು ಗಂಟೆಯಿಂದ ಗುರುಗಳು ತಮ್ಮ ಧ್ಯಾನದಲ್ಲಿ ಕಂಡುಕೊಂಡ ಅಷ್ಟ ಮಂಡಲ ದೀಕ್ಷೆಯನ್ನು ಶಿಷ್ಯರಿಗೆ ನೀಡಿದರು.

ಎರಡು ಪ್ರಕರಣಗಳು

ಗುರುಗಳ ಚಿಕಿತ್ಸಾ ವಿಧಾನಗಳನ್ನು ನಾವು ಕಂಡು ಟಿಪ್ಪಣಿ ಮಾಡಿಕೊಂಡಿದ್ದರೂ ನಮ್ಮಿಂದ ಅದು ಸಾಧ್ಯವೇ ಎಂಬ ಪ್ರಶ್ನೆ ನಮ್ಮೆಲ್ಲರಲ್ಲೂ ಮೂಡಿತ್ತು. ಆದರೆ ಒಂಭತ್ತನೆಯ ನಮ್ಮನ್ನು ನಾವು ಪರೀಕ್ಷೆಗೊಳಪಡಿಸಲು ಗುರುಗಳೇ ನಮಗೆ ವ್ಯವಸ್ಥೆ ಮಾಡಿಕೊಟ್ಟಿದ್ದರು. 

ಒಂಭತ್ತನೇ ದಿನ ಹೊಸಬರಿಗೆ ಗುರುಗಳು ಒಂದು ದಿನದ ಚಿಕಿತ್ಸಾ ಕಾರ್ಯಕ್ರಮವನ್ನು ಇಟ್ಟಿದ್ದರು. ಇದಕ್ಕೆ ನೂರಾರು ಜನರು ಬಂದಿದ್ದರು. ಜೊತೆಗೆ ಒಂದು ಶಾಲೆಯ ಒಂದಷ್ಟು ವಿದ್ಯಾರ್ಥಿಗಳನ್ನು ಗುರುಗಳು ಆಹ್ವಾನಿಸಿದ್ದರು. ಬಂದವರು ಟ್ರಾನ್ಸ್ ಸ್ಥಿತಿಗೆ ಹೋಗುವರೇ ಇಲ್ಲವೇ ಎಂದು ಪರೀಕ್ಷಿಸುವ ವಿಧಾನವನ್ನು ಗುರುಗಳು ಮೊದಲ ದಿನವೇ ನಮಗೆ ತಿಳಿಸಿ ಕೊಟ್ಟಿದ್ದರು. ಅದರಂತೆ ಬಂದವರ ಮೇಲೆ ಈ ವಿಧಾನವನ್ನು ಪ್ರಯೋಗಿಸಿ ಯಾರು ಆ ಸ್ಥಿತಿಯನ್ನು ತಲುಪವರೋ, ಅವರನ್ನು ನಮಗೆ ಚಿಕಿತ್ಸೆ ನೀಡಲು ಕಳುಹಿಸಿದರು.

ಅದೃಷ್ಟವಶಾತ್ ನನಗೆ ಮತ್ತು ಇನ್ನೋರ್ವ ಶಿಬಿರಾರ್ಥಿಗೆ ಸಿಕ್ಕವಳು ವಿದ್ಯಾರ್ಥಿನಿ. ಕಾಕತಾಳೀಯವಾಗಿ ನಾವಿಬ್ಬರೂ ಶಿಕ್ಷಣ ವೃತ್ತಿಯಲ್ಲಿದ್ದವರು. ಹುಡುಗಿಯನ್ನು ನನ್ನ ಸಹ ಶಿಬಿರಾರ್ಥಿ ಸೂಚನೆ ನೀಡಿ ಕೂಡಲೇ ಟ್ರಾನ್ಸ್ ಗೆ ಹಾಕಿದರು. ವಿದ್ಯಾರ್ಥಿನಿಯ ಪ್ರಸ್ತುತ ಸಮಸ್ಯೆ ಓದಿನಲ್ಲಿ ಹಿಂದೆ ಬಿದ್ದಿರುವುದು ಮತ್ತು ರಕ್ತದೊತ್ತಡ ಒಮ್ಮೆ ಹೆಚ್ಚಾಗಿದ್ದದ್ದು. ಮೂರು ತಿಂಗಳ ಹಿಂದೆ ಆಕೆ ತುಂಬಾ ಇಷ್ಟ ಪಡುತ್ತಿದ್ದ ದೊಡ್ಡಪ್ಪ ಹೃದಯಾಘಾತದಿಂದ ತೀರಿ ಹೋಗಿದ್ದು ಆಕೆಯನ್ನು ಕಾಡಿದೆ. ಆಕೆಯನ್ನು ಟ್ರಾನ್ಸ್ ಗೆ ಒಳಪಡಿಸಿದ ಮೇಲೆ ತನ್ನ ತಂದೆ ತಾಯಿಗಳ ಜಗಳದ ಕುರಿತೂ ಆಕೆ ಹೇಳಿದಳು. 

ತನ್ನ ದೊಡ್ಡಪ್ಪನ ಆತ್ಮ ಆಕೆಯ ಕಾಲಿನಲ್ಲಿ ಕಂಡಳು. ನಾವು ಆಕೆಯ ದೊಡ್ಡಪ್ಪನ ಆತ್ಮವನ್ನು ಆಹ್ವಾನಿಸಿ ಮಾತನಾಡಿಸಿದೆವು. ಅವರಿಗೂ ಇವಳದೇ ಚಿಂತೆ ಇತ್ತು. ಈಕೆಯ ದೇಹವನ್ನು ಬಿಟ್ಟು ಹೋಗಲು ಅವರಿಗೆ ಮನಸ್ಸಿಲ್ಲದಿದ್ದರೂ ಅಳುತ್ತಾ ದೇಹವನ್ನು ಬಿಟ್ಟರು. ಈ ಹುಡುಗಿ ವಿದ್ಯಾಭ್ಯಾಸದಲ್ಲಿ ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ಧನಾತ್ಮಕ ಸೂಚನೆಯನ್ನು ನೀಡಿದೆವು.

ಅನಿರೀಕ್ಷಿತವಾಗಿ ಇನ್ನೊಂದು ಪ್ರಕರಣ ನನಗೆ ದೊರೆಯಿತು. ಒಬ್ಬಳು ಇಪ್ಪತ್ತನಾಲ್ಕು ವರ್ಷದ ಹುಡುಗಿ ಆಕೆಯ ತಾಯಿಯೊಂದಿಗೆ ಬಂದಿದ್ದಳು. ಆಕೆಯಿಂದ ಮಾಹಿತಿಯನ್ನು ಪಡೆದು ನಾನೇ ಆಕೆಗೆ ಟ್ರಾನ್ಸ್ ಗೆ ಒಳಪಡಿಸಿ ಹಿಂದಿನ ಜನ್ಮಕ್ಕೆ ಕಳಿಸಿದೆವು. ಆರಂಭದಲ್ಲಿ ಯಾವುದೇ ಸ್ಪಷ್ಟತೆ ಇರಲಿಲ್ಲ. ಕೊನೆಗೆ ತಿಳಿದು ಬಂದಿದ್ದು ಏನೆಂದರೆ ಆಕೆಯ ತಾಯಿಯೇ ಆಕೆಯ ಆತ್ಮ ಸಂಗಾತಿ. ಹಿಂದಿನ ಯಾವುದೋ ಒಂದು ಜನ್ಮದಲ್ಲಿ ಆಕೆ ಆಕೆಯ ತಾಯಿಯ ತಾಯಿಯಾಗಿದ್ದಳು. ಆಕೆಯ ತಂದೆ ಆಕೆಯ ಅಳಿಯ(ಮಗಳ ಗಂಡ) ಆಗಿದ್ದನು. ಆ ಅಳಿಯ ಈಕೆಗೆ ಮೋಸ ಮಾಡಿ ಈಕೆಯ ಅಕ್ಕಿಯನ್ನು ಕದ್ದು ಮಗಳ ಜೊತೆ ಓಡಿ ಹೋಗಿದ್ದನು ಎನ್ನುವುದನ್ನು ಆಕೆ ಹೇಳಿದ್ದಳು. 

ತಂದೆಯ ಜೊತೆಗಿನ ಆಕೆಯ ಸಂಬಂಧ ಅಷ್ಟೊಂದು ಉತ್ತಮವಾಗಿಲ್ಲ ಎಂದು ನಮಗೆ ಮೊದಲೇ ತಿಳಿದಿತ್ತು. ಆಕೆಯ ಹೇಳಿಕೆಯ ಪ್ರಕಾರ ಈ ಜನ್ಮದಲ್ಲಿ ತನ್ನ ತಾಯಿಯನ್ನು ರಕ್ಷಿಸಲು ತಾನು ಹುಟ್ಟಿರುವುದಾಗಿ ಹೇಳಿದಳು. 

ಇದರ ಜೊತೆಗೆ ಭವಿಷ್ಯದ ಕೆಲವು ಅಂಶಗಳನ್ನು ಆಕೆಗೆ ಕಾಣಲು ಸಾಧ್ಯವಾಯಿತು. ಆಕೆಯ ದೇಹದಲ್ಲಿದ್ದ ಎಲ್ಲಾ ನೋವುಗಳನ್ನು ನಿವಾರಿಸಲು ದೇವಾನು ದೇವತೆಗಳಿಂದ ಶಕ್ತಿಯನ್ನು ಪಡೆದು ಆಕೆಯನ್ನು ಗುಣಪಡಿಸಿದೆವು.

ಈ ಎರಡೂ ಪ್ರಕರಣದಲ್ಲಿ ನಮ್ಮಿಂದ ಚಿಕಿತ್ಸೆ ಪಡೆದ ಇಬ್ಬರೂ ಹೆಣ್ಣುಮಕ್ಕಳು ತಮಗೆ ಚಿಕಿತ್ಸೆಯ ನಂತರ ತುಂಬಾ ಆರಾಮ ಎನ್ನಿಸಿತು ಎಂದರು. ಮೊದಲ ಬಾರಿ ನನಗೆ ಈ ಅನುಭವ ಆರಿರುವುದರಿಂದ ನನ್ನ ಆತ್ಮವಿಶ್ವಾಸ ಹೆಚ್ಚಿಸಿದ್ದಷ್ಟೇ ಅಲ್ಲದೆ ಜೀವನ ಧನ್ಯವೆನಿಸಿತು.


ಚಿಕಿತ್ಸಕ ಕೈಗಳು

ಗುರುಗಳು ನಮಗೆ ಚಿಕಿತ್ಸಕ ಕೈಗಳನ್ನು ನೀಡಿದ್ದನ್ನು ಪರೀಕ್ಷೆಗೊಳಪಡಿಸುವ ಅವಕಾಶ ಒಂಬತ್ತನೇ ದಿನವೇ ದೊರೆಯಿತು. ಉಪ್ಪು ನೀರಿನ ಮೂಲಕ ಚಿಕಿತ್ಸೆಗೊಳಪಡಿಸುವ ಈ ಪ್ರಕ್ರಿಯೆ ಒಟ್ಟು ನಲವತ್ತೈದು ನಿಮಿಷ ತೆಗೆದುಕೊಂಡಿದ್ದು ನಮ್ಮ ಕೈಗಳಿಂದ ನಾವು ಎಲ್ಲಾ ದೇವಾನು ದೇವತೆಗಳನ್ನು ಸ್ಮರಿಸಿ ಚಿಕಿತ್ಸೆ ನೀಡಿದೆವು. ನನ್ನಿಂದ ಚಿಕಿತ್ಸೆಗೊಳಪಟ್ಟ ಮಹಿಳೆಯ ಬಳಿ ಆಕೆಯ ಅನುಭವನ್ನು ಕೇಳಿದಾಗ ತನ್ನ ದೇಹದಲ್ಲಿರುವ ಎಲ್ಲಾ ನೋವುಗಳು ನಿವಾರಣೆಯಾಗಿ ಆರಾಮವಾಯಿತು ಎಂದು ತೃಪ್ತಿಯಿಂದ ಹೇಳಿದರು. 

ಒಟ್ಟಾರೆಯಾಗಿ ಹತ್ತು ದಿನಗಳ ಕಾಲ ನಡೆದ ವಿಚಾರಗಳನ್ನು ನಾನು ವ್ಯಕ್ತಪಡಿಸಿದ್ದು ಬಿಂದುವಿನಷ್ಟು. ನನ್ನ ಒಟ್ಟಾರೆ ಅನುಭವಗಳನ್ನು ನಾನು ಈ ಒಂದು ಲೇಖನದಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ನನ್ನಂತೆ ನೂರು ಜನ ಶಿಬಿರಾರ್ಥಿಗಳು ನೂರು ವಿಭಿನ್ನ ಅನುಭವಗಳನ್ನು ಹಂಚಿಕೊಂಡರೂ ಅದರಲ್ಲಿ ಒಂದಿನಿತೂ ಆಶ್ಚರ್ಯವಿಲ್ಲ. ಈ ಅನುಭವ ನೀಡಿದ ಗುರು ಡಾ ರಾಮಚಂದ್ರ ಗುರೂಜಿಯವರಿಗೆ ಕೃತಜ್ಞತೆಗಳು.

Comments

Popular posts from this blog

ಸುಪ್ತ ಮನಸ್ಸಿನ ಅದ್ಭುತ ಸಾಮಾರ್ಥ್ಯಗಳು

ಫ್ಲರ್ಟ್: ಒ೦ದು ಹೃದಯಸ್ಪರ್ಶಿ ಪ್ರೇಮ ಕಥೆ