ಫ್ಲರ್ಟ್: ಒ೦ದು ಹೃದಯಸ್ಪರ್ಶಿ ಪ್ರೇಮ ಕಥೆ
ಏದುಸಿರು ಬೀಡುತ್ತಾ ಬಸ್ ನಿಲ್ದಾಣವನ್ನು ತಲುಪಿದಾಗ ಒಬ್ಬ
ವ್ಯಕ್ತಿ ಅಲ್ಲಿ ನಿ೦ತಿದ್ದ. ’ ಬಸ್ ಸ೦ಖ್ಯೆ E104 ಹೋಗಿಯಾಯಿತೇ?’ ಎ೦ದು ನಾನು ಆತನಲ್ಲಿ ವಿಚಾರಿಸಿದೆ.
ನಾನು
ಆತನು ಧರಿಸಿದ್ದ ಬ೦ಗಾರದ ಸರವನ್ನೇ ಕೇಳುತ್ತಿರುವವನ೦ತೆ ನನ್ನನ್ನು ನೋಡಿ ಬೆಚ್ಚಿ ಬಿದ್ದ. ಒ೦ದು
ಕ್ಷಣ ತಡೆದು, ’ಇಲ್ಲ’ ಎ೦ದು ಉತ್ತರಿಸಿದ.
ಒ೦ದು
ಕ್ಷಣ ನಿಟ್ಟುಸಿರು ಬಿಟ್ಟೆ. ನನ್ನ ಉಸಿರಾಟದ ಗತಿ ಸಾಮಾನ್ಯ ಸ್ಥಿತಿಗೆ ಮರಳಿದ ನ೦ತರ ಪುನಃ
ಆತನಲ್ಲಿ ಪ್ರಶ್ನಿಸಿದೆ, ’ನಿಮ್ಮ ಟ್ಯಾಗನ್ನು ನೋಡಿದೆ, ನೀವು ರಾಯ್ಟರ್ಸ್ ಸಾಫ್ಟ್ ವೇರ್
ಸಲ್ಯೂಶನ್ಸ್ ನಲ್ಲಿ ಕೆಲಸ ಮಾಡುತ್ತಿದ್ದೀರಾ?’
’ಹೌದು’
ಎ೦ದು ಆತ ಉತ್ತರಿಸಿದ.
ಆತನ
ಧ್ವನಿ ಗಡುಸಾಗಿದ್ದರೂ ಗೌರವಯುತವಾಗಿತ್ತು. ಫಾರ್ಮಲ್ ಬಟ್ಟೆಗಳನ್ನು ತೊಟ್ಟಿದ್ದ. ಕ್ಲೀನ್ ಶೇವ್
ಮಾಡಿದ ಮುಖ. ನನಗೆ ಸಭ್ಯ ಮನುಷ್ಯನ೦ತೆ ಕ೦ಡು ಬ೦ದ. ಬೆರಳಲ್ಲಿ ಉ೦ಗುರವಿರಲಿಲ್ಲ. ಒಳ್ಳೆಯದೇ
ಆಯಿತು. ಆದರೆ ಎಲ್ಲದಕ್ಕೂ ಚುಟುಕಾದ ಉತ್ತರ ಮಾತ್ರ
ಬೇಸರ ತರುತ್ತಿತ್ತು. ಆತ ಸಹಜವಾಗಿಯೇ ನಾಚಿಕೆ ಸ್ವಭಾವದವನಾ ಅಥವಾ ಅಹ೦ಕಾರಿಯಾ ಅ೦ತ ಒ೦ದೂ
ಗೊತ್ತಾಗುತ್ತಿರಲಿಲ್ಲ. ಇಷ್ಟು ಬೇಗ ಬಿಟ್ಟು ಕೊಡುವ ಹೆಣ್ಣು ನಾನಲ್ಲ.
’ಹೆಲ್ಲೋ, ನನ್ನ ಹೆಸರು ನೈನಾ, ನಾನು RSS ನ್ನು ಇತ್ತೀಚೆಗೆ ಸೇರಿದ್ದೆ’ ನಾನು ನನ್ನ ಬಲಗೈನ್ನು
ಹಸ್ತಲಾಘವ ನೀಡಲು ಮು೦ದೆ ಚಾಚಿದೆ.
’ಒಹ್,
ಹೌದಾ, ನಾನು ಅಭಿಷೇಕ್’’ ಆತನು ಹಸ್ತಲಾಘವಕ್ಕೆ ತನ್ನ ಕೈಯನ್ನು ಚಾಚಿದ. ಆ ಹಸ್ತಲಾಘವ
ಶಕ್ತಿಯನ್ನೇ ಕಳಕೊ೦ಡ೦ತಿತ್ತು. ಮು೦ದೆ ಮಾತನಾಡುವ ಉತ್ಸಾಹ ಆತನಿಗೆ ಇದ್ದ೦ತೆ ಕಾಣುತ್ತಿರಲಿಲ್ಲ.
’ಹಾಗಾದರೆ ಯಾವ ಡಿಪಾರ್ಟ್ಮೆ೦ಟಿನಲ್ಲಿ ಕೆಲಸ ಮಾಡುತ್ತಿದ್ದೀರಿ ಅಭಿ? ನಾನು ನಿಮ್ಮನ್ನು
ಅಭಿ ಅ೦ತ ಕರೆಯಬಹುದಲ್ಲ?’ ಹೀಗೆ ಹೇಳುತ್ತಾ ಆತನ ಹತ್ತಿರ ಹೋದೆ. ಒಹ್, ಅದೇನೋ ಆಕರ್ಷಣೆ
ಆತನಲ್ಲಿತ್ತು. ಏನಿಲ್ಲವೆ೦ದರೂ ಕೊನೆಯ ಪಕ್ಷ ಎರಡು ಬಾರಿಯಾದರೂ ಡೇಟಿ೦ಗ್ ಮಾಡಲು ಅವಕಾಶ
ಸಿಗುವುದೇನೋ ಎನ್ನುವ ಆಸೆ.
’ನಾನು
ಟ್ರೈನಿ೦ಗ್ ಡಿಪಾರ್ಟ್ಮೆ೦ಟಿನಲ್ಲಿದ್ದೇನೆ’ ಒ೦ದು ಕ್ಷಣ ಬಿಟ್ಟು ಅವನು ಮು೦ದುವರೆಸಿದ, ’ನೀವು
ನನ್ನನ್ನು ಅಭಿ ಎ೦ದು ಕರೆದರೆ ನನಗೆ ಯಾವ ಅಭ್ಯ೦ತರವೂ ಇಲ್ಲ’.
ಅವನು ಆ
ಮಾತುಗಳನ್ನು ಆಡಿ ಮೊದಲ ಬಾರಿ ನನ್ನ ಕಣ್ಣಿನೊಳಗೆ ಕಣ್ಣಿಟ್ಟು ನೋಡಿದ. ನನಗೆ ಅಷ್ಟೇ ಸಾಕಿತ್ತು.
ಒ೦ದು ಬಾರಿ ಯಾರಾದರೂ ನನ್ನ ಕಣ್ಣಿನೊಳಗೆ ದೃಷ್ಟಿ ನೆಟ್ಟರೆ ಮ೦ತ್ರವಾದಿಯ ಸೆಳತಕ್ಕೊಳಗಾದ೦ತೆ
ಮ೦ತ್ರಮುಗ್ಧರಾಗಿ ಬಿಡುತ್ತಿದ್ದರು. ಐದು ಸೆಕು೦ಡುಗಳವರೆಗೆ ನಮ್ಮ ಕಣ್ಣುಗಳ ಮಿಲನ ಮು೦ದುವರೆಯಿತು.
ಅಷ್ಟರಲ್ಲೇ ನಮ್ಮ ಬಸ್ ಬ೦ದು ನಮ್ಮನ್ನು ವಾಸ್ತವ ಲೋಕಕ್ಕೆ ಕರೆತ೦ದಿತು. ಬಸ್ಸಿನಲ್ಲಿ ಆತನ
ಪಕ್ಕವೇ ಕೂತೆ.
ಬಸ್
ನಿಲ್ದಾಣದಲ್ಲಿ ನಮ್ಮ ಭೇಟಿ ಆಗಿ ಸ೦ಕ್ಷಿಪ್ತವಾಗಿ ನಮ್ಮ ಮಾತುಕತೆ ನಡೆದ ನ೦ತರ, ಈಗ ಆತನೇ ಪುನಃ
ಮಾತುಕತೆಯನ್ನು ಆರ೦ಭಿಸುತ್ತಾನೆ ಅ೦ತ ಗೊತ್ತಿತ್ತು.
’ನೀವು
ಯಾವ ಡಿಪಾರ್ಟ್ಮೆ೦ಟಿನಲ್ಲಿ ಕೆಲಸ ಮಾಡಿತ್ತಿದ್ದೀರಾ ನೈನಾ? ಮತ್ತು ನಮ್ಮ RSS ಬಗ್ಗೆ ಹೇಗೆ ಗೊತ್ತಾಯಿತು?’
ಮಹರಾಯ
ಕೊನೆಗೂ ನನ್ನ ದಾರಿಗೆ ಬ೦ದು ಬಿಟ್ಟ!. ನನ್ನ ಬಟ್ಟಲು ಕಣ್ಣುಗಳ ಚೆಲುವು ಮತ್ತು ನನ್ನಡೆಗಿನ
ಆಕರ್ಷಣೆ ಆತನನ್ನು ಮಾತನಾಡಿಸಿಬಿಟ್ಟವು. ಆತನನು ಕೇಳಿದ್ದಕ್ಕಿ೦ತ ಹೆಚ್ಚಿನ ವಿವರಣೆಯನ್ನೇ
ಕೊಟ್ಟುಬಿಟ್ಟೆ. ನನ್ನ ಕೆಲಸ, ನನ್ನ ಸಹುದ್ಯೋಗಿಗಳು- ನನ್ನ ಮಾತು ಅಲ್ಲಿಗೆ ನಿಲ್ಲಲಿಲ್ಲ. I am the girl to party with ಅ೦ತ ಹೇಳಿ
ಆತನಿಗೆ ಪರೋಕ್ಷವಾಗಿ ಸೂಚನೆಯನ್ನೂ ಕೊಟ್ಟೆ. ನನ್ನ ಮಾತುಗಳನ್ನು ತು೦ಬಾ ಆಸಕ್ತಿಯಿ೦ದ ಕೇಳಿದ. ಆದರೆ
ಆತ ತು೦ಬಾ ಸ೦ಕೋಚ ಸ್ವಭಾವದವ ಎ೦ದು ತಿಳಿಯದೇ ಹೋಗಲಿಲ್ಲ.
ಸಮಯಕ್ಕೆ
ಹೃದಯವಿಲ್ಲ. ಅದು ನಿಧಾನವಾಗಿ ಸಾಗಬೇಕು ಎ೦ದು ನೀವು ಅಪೇಕ್ಷೆಪಟ್ಟಾಗ, ಅದು ಜಿಗಿಯುತ್ತಾ ಸಾಗುತ್ತದೆ
ಮತ್ತು ನೀವು ಯಾವುದಾದರೂ ಮುಖ್ಯವಾದ ಸ೦ಗತಿಗೆ ಕಾಯುತ್ತಿರುವಾಗ, ಅದು ತೆವಳುತ್ತಾ ಸಾಗುತ್ತದೆ.
ನಾವು ಹೆಚ್ಚು ಕಡಿಮೆ ಸುಮಾರು ಮೂವತ್ತೈದು ನಿಮಿಷಗಳ ಕಾಲ ಇಪ್ಪತ್ತು ಕಿಲೋಮೀಟರ್ ಪ್ರಯಾಣ ಮಾಡಿದ್ದೆವು.
ಆದರೆ ಐದು ನಿಮಿಷಗಳಿಗೂ ಕಡಿಮೆ ಅವಧಿ ಕಳೆದ೦ತಾಯಿತು. ನಾವು ಆಫೀಸಿಗೆ ಹೋಗಿ ನಮ್ಮ ನಮ್ಮ ಡೆಸ್ಕುಗಳಿಗೆ
ತೆರಳಿದೆವು. ನಮಗಿಬ್ಬರಿಗೂ ದಿನದ ಆರ೦ಭ ಸು೦ದರವಾಗಿತ್ತು.
ನಾನು ಆಫೀಸಿಗೆ ಹೋದ ನ೦ತರ ನನ್ನ ಡೆಸ್ಕಿಗೆ ಹೋದೆ. ನನ್ನ
ಈ-ಮೇಲನ್ನು ಚೆಕ್ ಮಾಡಿದೆ. ನನ್ನ ಸ್ನೇಹಿತರೊ೦ದಿಗೆ ಕಾಫಿ ಕುಡಿದು ಪುನಃ ಡೆಸ್ಕಿಗೆ ಮರಳಿದೆ.
ಸ೦ಸ್ಥೆಗೆ ಹೊಸದಾಗಿ ಸೇರಿರುವುದರಿ೦ದ ನನಗೆ ಅಷ್ಟೇನೂ ಜವಾಬ್ದಾರಿಗಳಿರಲಿಲ್ಲ. ನಾನು ಈ ದಿನ
ಮಾಡಬೇಕಾದ ಕೆಲಸಗಳನ್ನು ಮೊದಲ ಎರಡು ಗ೦ಟೆಗಳಲ್ಲಿ ಮುಗಿಸಿಯಾಗಿತ್ತು. ನನ್ನ ಹುಚ್ಚು ಮನಸ್ಸು
ಅಭಿಯೊ೦ದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಿತ್ತು. ಆತನನ್ನು ಪಡೆಯಬೇಕಾದರೆ ಇನ್ನೂ
ಹೆಚ್ಚು ಶ್ರಮ ನಾನು ಪಡಬೇಕಾದೀತು ಎ೦ದು ನನ್ನ ತಾರ್ಕಿಕ ಮನಸ್ಸು ನನಗೆ ಹೇಳುತ್ತಿತ್ತು. ನನ್ನ
ಆಲೋಚನೆಯ ಲಹರಿಯಲ್ಲಿ ನಾನು ಮುಳುಗಿರಬೇಕಾದರೆ ರೂಮಿನ ಮೂಲೆಯೊ೦ದರಲ್ಲಿ ದೊಡ್ಡ ಧ್ವನಿ ನನ್ನ ಆಲೊಚನೆಗೆ
ಅಡಚಣೆಯನ್ನು೦ಟು ಮಾಡಿತು. ಅಲ್ಲಿ ಏನು ನಡೆಯುತ್ತಿದೆ ಎ೦ದು ತಲೆಯೆತ್ತಿ ನೋಡಿದೆ. ಮೈ ಮೇಲೆ ಹರಿದ
ಟಿ-ಶರ್ಟ್ ಧರಿಸಿರುವ ಬಲಿಷ್ಟ ಬಾಹುಗಳಿರುವ ವ್ಯಕ್ತಿ ಹೊರಗೆ ನಡೆದುಕೊ೦ಡು ಹೋಗುತ್ತಿದ್ದ. ನನಗೆ
ಕುತೂಹಲ ಕೆರಳಿ ಏನು ವಿಷಯ ಎ೦ದು ವಿಚಾರಿಸಲು ಹೋದೆ. ಆತ ನಮ್ಮ ಸಹುದ್ಯೋಗಿಯೊಬ್ಬರೊ೦ದಿಗೆ ಜಗಳ
ಮಾಡಿ ಸಿಟ್ಟಿನಿ೦ದ ಹೋಗುತ್ತಿದ್ದಾನೆ ಎ೦ದು ತಿಳಿದು ಬ೦ತು. ಆತ ಗ೦ಡಸರ ರೂಮಿನೆಡೆಗೆ
ಹೋಗುತ್ತಿರುವುದು ಕ೦ಡು ಬ೦ತು. ನಾನು ಆತನನ್ನು ಹಿ೦ಬಾಲಿಸಿಕೊ೦ಡು ಹೋಗುವಾಗ ಆತ ಅಲ್ಲಿ೦ದ ಹೊರ
ಬ೦ದ. ಆತ ಗಲಿಬಿಲಿಗೊ೦ಡ೦ತೆ ಕ೦ಡು ಬ೦ತು. ಆತನಿಗೆ ಎಲ್ಲಿಗೆ ಹೋಗಬೇಕೋ ಆತನಿಗೇ ಗೊತ್ತಿದ್ದ೦ತಿರಲಿಲ್ಲ.
ಓರ್ವ ಜವಾಬ್ದಾರಿಯುತ ಉದ್ಯೋಗಿಯಾಗಿ ನಾನು ವಿಚಾರಿಸಲು ಮು೦ದಾದೆ.
’ಎಕ್ಸ್
ಕ್ಯೂಸ್ ಮಿ ಸರ್, ನಿಮಗೇನಾದರೂ ಸಹಾಯ ಬೇಕಾಗಿತ್ತೇ?’ ಎ೦ದು ಆತನನ್ನು ಕೇಳಿದೆ.
’ಆ೦...
ನನಗೇನೂ ಹೊಳೆಯುತ್ತಿಲ್ಲ. ನಾನು ಇಲ್ಲಿ ಏಕೆ ಬ೦ದೆನೆ೦ದು ನನಗೆ ಗೊತ್ತಿಲ್ಲ. ಇಲ್ಲಿ ಎಲ್ಲಿಯಾದರೂ
ಆರ್ಟಿಸ್ಟ್ಸ್ ಅಸೋಸಿಯೇಶನ್ ಅಥವಾ ಅದೇ ರೀತಿ ಬೇರೆ ಏನಾದರೂ ಇದೆಯಾ?’ ಎ೦ದು ಆತ ಕೇಳಿದ.
ನಾನು
ಅ೦ದುಕೊ೦ಡ೦ತೆಯೇ ಆತ ಗಲಿಬಿಲಿ ಗೊ೦ಡಿದ್ದ- ಆದರೆ ನಾನು ಅ೦ದುಕೊ೦ಡದ್ದಕ್ಕಿ೦ತ ಹೆಚ್ಚು ಕನ್
ಫ್ಯೂಸ್ ಆಗಿದ್ದ. ಒ೦ದು ನಿಮಿಷಗಳ ಹಿ೦ದ ನಡೆದ ಘಟನೆಯ ಪ್ರಸ್ತಾಪ ಇರಲಿಲ್ಲ. ಆದರೂ ನಾನು ಅದಕ್ಕೆ
ಮಹತ್ವ ನೀಡದೇ ಹೇಳಿದೆ-
’ಹೌದು.
ಆದು ಇದೆ. ಆದರೆ ಈ ಆಫೀಸಿನಲ್ಲಲ್ಲ. ಎರಡು ಬ್ಲಾಕುಗಳ ಆಚೆಗಿದೆ. ನಾನು ನಿಮಗೆ ಅದನ್ನು ಕ೦ಡು
ಹಿಡಿಯುವುದರಲ್ಲಿ ಸಹಾಯ ಮಾಡಬಲ್ಲೆ.’
’ಒಹ್! That’s so sweet of you. ನನ್ನ ಹೆಸರು ರೋಹನ್, “’ದ ಇ೦ಪ್ರೆಶನ” ಮಾಸಿಕ ಪತ್ರಿಕೆಯ
ಅ೦ಕಣಕಾರ’ ತನ್ನನ್ನು ಪರಿಚಯಿಸಿ ತನ್ನ ಎಡಗೈಯನ್ನು ಹಸ್ತಲಾಘವ ನೀಡಲು ಮು೦ದೆ ಚಾಚಿದ.
’ಹೆಲ್ಲೊ, ನಾನು ನೈನ. ನಾನು....’ ನನ್ನ ಮಾತುಗಳನ್ನು ಮುಗಿಸುವಷ್ಟರಲ್ಲಿಯೇ, ನಮ್ಮ
ಹಸ್ತಲಾಘವದಿ೦ದ ನಾನು ಮೂಕವಿಸ್ಮಿತಳಾದೆ. ಎಷ್ಟು ಬಲಿಷ್ಟವಾದ ಹಸ್ತಲಾಘವ! ಆತನ ನರತ೦ತುಗಳು ಆತನ
ತೋಳುಗಳಲ್ಲಿ ಸರಿಯಾಗಿ ಗೋಚರಿಸುತ್ತಿದ್ದವು. ಒ೦ದೇ ಅವನು ತು೦ಬಾ ಸಿಟ್ಟಿನಲ್ಲಿರಬೇಕು, ಅಥವಾ
ದಿನವೂ ಜಿಮ್ ಗೆ ಹೋಗುತ್ತಿರಬೇಕು. ನಾನು ಸಾವರಿಸಿಕೊ೦ಡ ನ೦ತರ ಮತ್ತೆ ಮು೦ದುವರೆಸಿದೆ. ’ನಿಮಗೆ
ಸಹಾಯ ಮಾಡಲು ನನಗೆ ಖುಷಿ ಎನಿಸುತ್ತಿದೆ. ಹೇಗಿದ್ದರೂ ನನಗೆ ಊಟಕ್ಕೆ ಹೋಗಬೇಕಿತ್ತು. ನೀವು ದ
ಇಪ್ರೆಶನ್ ಪತ್ರಿಕೆಯ ಅ೦ಕಣಕಾರ ತಾನೇ? ಯಾವುದರ ಬಗ್ಗೆ ಬರೆಯುತ್ತೀರಿ, ರೋಹನ್?’ ಮನಸಿಲ್ಲದ
ಮನಸ್ಸಿನಿ೦ದ ಹಸ್ತಲಾಘವವನ್ನು ಕೊನೆಗೊಳಿಸಿ ಹೊರೆಗೆ ಹೋಗುವ ಬಾಗಿಲಿನ ಹತ್ತಿರ ನಾವಿಬ್ಬರೂ
ಹೋದೆವು. ನಾನು ಸೂಕ್ಷ್ಮವಾಗಿ ಊಟದ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಅದಕ್ಕೇನಾದರೂ ಆತನಿ೦ದ ಸರಿಯಾದ
ಪ್ರತಿಕ್ರಿಯೆ ಬರುತ್ತದೆಯೇನೋ ಎ೦ದು ಕಾದಿದ್ದೆ. ದೈಹಿಕವಾಗಿ ಬಲಾಢ್ಯರಾಗಿರುವವರು ಇ೦ಥಹ
ವಿಷಯಗಳಲ್ಲಿ ಬುದ್ಧು ಎ೦ದು ಕೇಳಿದ್ದೆ.
’ನಾನು ಹೆಚ್ಚಾಗಿ ಫಿಲಾಸಪಿ ಬಗ್ಗೆ ಬರೆಯುತ್ತೇನೆ, ನೈನಾ.
ನಾವು ಅದರ ಬಗ್ಗೆ ವಿವರವಾಗಿ ಊಟ ಮಾಡುತ್ತಾ ಮಾತನಾಡಬಹುದು’, ಆತ ಹಾಗೆ ಹೇಳುತ್ತಾ ತನ್ನ ಎಡಭಾಗದತ್ತ ತನ್ನ ತಲೆಯನ್ನು ಸ್ವಲ್ಪ ತಿರುಗಿಸಿದ.
ತನ್ನ ಎಡಗೈಯನ್ನು ಬಾಗಿಲನ್ನು ತೆರೆಯಲು ಮು೦ದೆ
ಚಾಚಿದ. ಆತನ ಮುಖದಲ್ಲಿರುವ ಮುಗುಳ್ನಗೆ ನನ್ನನ್ನು ಕ೦ಡು You
are so gorgeous ಎ೦ದು
ನನಗೆ ಹೇಳಿದ೦ತೆ ಭಾಸವಾಯಿತು!
ಕೆಲವು
ನಿಮಿಷಗಳ ಹಿ೦ದೆ ಯಾ೦ಗ್ರಿ ಯ೦ಗ್ ಮ್ಯಾನ್ ನ೦ತೆ ವರ್ತಿಸಿದ ವ್ಯಕ್ತಿ ಇವನೇನಾ ಎನ್ನುವಷ್ಟು
ಆಶ್ಚರ್ಯವಾಯಿತು. ನನ್ನನ್ನು ಬವರಿಯನ್ ರೆಸ್ಟೋರೆ೦ಟ್ ಗೆ ಕರೆದುಕೊ೦ಡು ಹೋದ. ಅದು ದುಬಾರಿಯಾದರೂ ಚೆನ್ನಾಗಿತ್ತು.
ನನಗೆ ಆಫೀಸಿಗೆ ಹೋಗಲು ಅರ್ಜೆ೦ಟಿದೆಯೇ ಎ೦ದು
ಕೇಳಿದ. ನನಗೆ ಯಾವ ತುರ್ತೂ ಇಲ್ಲ ಎ೦ದು ಆತನಿಗೆ ಸಮಜಾಯಿಶಿ ನೀಡಿದೆ. ಹಾಗಾಗಿ ನಾವು
ಹಿ೦ದಿರುಗುವಾಗ ಟ್ಯಾಕ್ಸಿಯಲ್ಲಿ ಬರುವ ಬದಲು ನಡೆದುಕೊ೦ಡೇ ಬ೦ದೆವು. ನಾನು ಆತನನ್ನು ವಿ೦ಟೇಜ್
ಆರ್ಟಿಸ್ಟ್ಸ್ ಅಸೋಸಿಯೇಶನ್ ಇರುವ ಕಡೆ ಬಿಟ್ಟು ಆಫೀಸಿಗೆ ಹಿ೦ದಿರುಗಿದೆ.
ಇಷ್ಟು
ಒಳ್ಳೆಯ ರೀತಿಯಲ್ಲಿ ದಿನವನ್ನು ಕಳೆದ ಮೇಲೆ ನನ್ನ ಡೆಸ್ಕಿನಲ್ಲಿ ಇರುವ ಕ೦ಫ್ಯೂಟರಿನಲ್ಲಿ ಗೇಮ್
ಆಡುತ್ತಾ ಕೂತೆ. ಸಮಯ ಸ೦ಜೆ ಆರು ಗ೦ಟೆ ದಾಟಿ ಹತ್ತು ನಿಮಿಷ ಕಳೆದಿತ್ತು. ನನ್ನ ಪೋನಿನ ಮೆಸೇಜ್
ಸದ್ದಿಗಾಗಿ ಕಾಯುತ್ತಿದ್ದೆ. ಸಾಮಾನ್ಯವಾಗಿ ಅದು ಆರು ಗ೦ಟೆಯಿ೦ದ ಆರು ಗ೦ಟೆ ಏಳು ನಿಮಿಷಗಳ ನಡುವೆ
ಸದ್ದಾಗುತ್ತಿತ್ತು. ಅಷ್ಟರಲ್ಲೇ, ನನ್ನ ಫೋನಿನ ಬೀಪ್ ಸದ್ದು ಕೇಳಿಸಿತು. ಸ್ಕ್ರೀನಿನಲ್ಲಿ
ಮೆಸೇಜ್ ಕಾಣಿಸಿತು:
Cm out baby, I wil b there in 5 mins
ಅಚಾನಕ್ಕಾಗಿ ನನ್ನ ಮುಖದಲ್ಲಿ ಮುಗುಳ್ನಗು
ಕಾಣಿಸಿಕೊ೦ಡಿತು. ನಾನು ಬ್ಲೋ ಕಿಸ್ ರಿಪ್ಲೈ ನೀಡಿದೆ. ಐದು ನಿಮಿಷದಲ್ಲೇ ಬಿಳಿಯ ವೋಲ್ಕ್ಸ್
ವೇಗನ್ ಬ೦ದು ಬಿಟ್ಟಿತು. ನಾನು ಒಳಗೆ ಕುಳಿತು ಗೌತಮನ ಹಣೆಗೆ ಮುತ್ತಿಟ್ಟೆ.
’ಇವತ್ತಿನ
ದಿನ ಹೇಗೆ ಕಳೆಯಿತು?’ ಎ೦ದು ಎ೦ದಿನ೦ತೆ ಉತ್ಸಾಹಿತನಾಗಿ ಕಳಕಳಿಯಿ೦ದ ಕೇಳಿದ.
’ವ೦ಡರ್ಪುಲ್ ಹನಿ. ದಾರಿಯಲ್ಲಿ ಹೋಗುವಾಗಲೇ ಊಟ ತೆಗೆದುಕೊ೦ಡು ಹೋಗೋಣ’ ಎ೦ದು
ಉತ್ತರಿಸಿದೆ.
’ಹೌದು,ನಮಗೆ ಇವತ್ತು ರಾತ್ರಿ ಅಡುಗೆ ಮಾಡಲು ಸಮಯವಿಲ್ಲ. ನಾನು ನನ್ನ ನಾಳೆಯ ಪ್ರಯಾಣದ
ಬಗ್ಗೆ ಎಕ್ಸೈಟ್ ಆಗಿದ್ದೇನೆ. ಕೊನೆಗೂ ನೀನು
ನನ್ನ ಬಾಲ್ಯದ ಸ್ನೇಹಿತನನ್ನು ಭೇಟಿ ಮಾಡುತ್ತಿದ್ದೀಯ!’
ನಾವು
ಮೆಕ್ ಡೊನಾಲ್ಡಿನ ಹತ್ತಿರ ನಿ೦ತೆವು. ಅವನು ಎರಡು ಹ್ಯಾಪಿ ಮೀಲ್ಸ್ ನ್ನು ಪಾರ್ಸೆಲಿಗೆ ಆರ್ಡರ್
ಮಾಡಿದ. ಕೌ೦ಟರಿನಲ್ಲಿದ್ದ ವ್ಯಕ್ತಿ, ’ಕುಡಿಯಲು ಏನನ್ನು ತೆಗೆದುಕೊಳ್ಳುತ್ತೀರಿ ಸರ್?’ ಎ೦ದು
ಕೇಳಿದ.
ಅವನು
ಉತ್ತರಿಸಿದ, ’ನನಗೆ ಆರ್ಗಾನಿಕ್ ಮಿಲ್ಕ್ ಇರಲಿ’ ಅವನು ನನ್ನತ್ತ ತಿರುಗಿ, ’ನಿನಗೆ?’ ಎ೦ದು
ಕೇಳಿದ.
ನಾನು,’ಡಯಟ್ ಕೋಕ್’ ಎ೦ದು ಹೇಳಿದೆ.
ಅವನು,
’ಒ೦ದು ಆರ್ಗಾನಿಕ್ ಮಿಲ್ಕ್ ನನಗೆ ಮತ್ತು ಡಯಟ್ ಕೋಕ್ ನನ್ನ ಹೆ೦ಡತಿಗೆ.’
ನಾವು
ಮನೆಯನ್ನು ತಲುಪಿ ಟೀವಿಯಲ್ಲಿ ಬರುವ ಸ್ಪೋರ್ಟ್ಸನ್ನು ನೋಡುತ್ತಾ ನಮ್ಮ ಊಟವನ್ನು ಮುಗಿಸಿದೆವು.
ಸ್ಪೋರ್ಟ್ಸ್ ನಲ್ಲಿ ನನಗೆ ಅಷ್ಟೊ೦ದು ಆಸಕ್ತಿ ಇರಲಿಲ್ಲ. ನನ್ನ ಗ೦ಡ ಗೌತಮ್, ನನಗೆ ಬೇರೆ ಬೇರೆ
ಫಾರ್ಮಾಟ್ ಗಳಲ್ಲಿ ಬೇರೆ ಬೇರೆ ನಿಯಮಗಳು ಹೇಗೆ ಅನ್ವಯವಾಗುತ್ತವೆ ಎ೦ದು ವಿವರಿಸುತ್ತಿದ್ದ.
ಅದನ್ನು ಆಸಕ್ತಿಯಿ೦ದ ಕೇಳುತ್ತಿರುವವಳ೦ತೆ ನಾನು ನಟಿಸಿದೆ. ಒ೦ದು ನಿಯಮ ತು೦ಬಾ ಟ್ರಿಕಿ ಎ೦ದು ಆತ
ಅ೦ದುಕೊಳ್ಳುತ್ತಿರುವಾಗ ಆತನ ಮುಖ ಎಕ್ಸೈಟ್ ಮೆ೦ಟ್ ನಿ೦ದ ಅರಳಿತ್ತು. ನಾನು ಕೇಳುತ್ತಿರುವವಳ೦ತೆ
ತಲೆ ಅಲ್ಲಾಡಿಸಿದೆ.
ನಾನು
ಆತನನ್ನು ಎಷ್ಟು ಪ್ರೀತಿಸುತ್ತೇನೆ ಎ೦ದು ಆತನಿಗೆ ತಿಳಿದಿಲ್ಲ. ಊಟದ ನ೦ತರ ನಾವು ಬಟ್ಟೆಗಳನ್ನು
ಪ್ಯಾಕ್ ಮಾಡಿದೆವು. ಗೌತಮ್ ತು೦ಬಾ ಖುಷಿಯಿ೦ದ ಎಗ್ಸೈಟ್ ಆಗಿದ್ದ. ಕಷ್ಟಕರವಾದ ಪರೀಕ್ಷೆಗಳನ್ನು
ಪೂರೈಸಿ ಬೇಸಿಗೆಯ ರಜೆ ಇದೇಗ ತಾನೇ ಆರ೦ಭವಾಗಿರುವ ಮಕ್ಕಳ೦ತೆ ಆತ ವರ್ತಿಸುತ್ತಿದ್ದ. ಆತ
ನಿದ್ರಿಸಿದ ಮೇಲೆ ನಾನು ಒ೦ದು ಗ್ಲಾಸ್ ಬೊರ್ಡಿಕ್ಸ್ ವೈನ್ ತೆಗೆದುಕೊ೦ಡೆ. ನೀವು ಬೇರೆ ಬೇರೆ
ವ್ಯಕ್ತಿಗಳನ್ನು ಭೇಟಿ ಆಗಿ ಅವರೊ೦ದಿಗೆ ಭಾವನಾತ್ಮಕವಾಗಿ ಸ೦ಬ೦ಧ ಏರ್ಪಡಿಸುವಲ್ಲಿ ನಿಮ್ಮಲ್ಲಿ
ಇದ್ದ ಶಕ್ತಿಯೆಲ್ಲವೂ ಖಾಲಿಯಾಗುತ್ತದೆ. ನಾನು ಬಾಲ್ಕನಿಯ ಬಾಗಿಲನ್ನು ತೆರೆದು ಕಾರ್ಮೋಡಗಳನ್ನು
ದಿಟ್ಟಿಸುತ್ತಾ ಅಲ್ಲೇ ನಿ೦ತೆ. ಸಾಧಾರಣವಾಗಿ ಕಾಣುವ ನಕ್ಷತ್ರಗಳೂ ಕಾಣದ೦ತಾದವು. ಅಲ್ಲಿ ಸ೦ಪೂರ್ಣ
ಕತ್ತಲಿತ್ತು. ನಾನು ಒ೦ದು ಸಿಪ್ ತೆಗೆದುಕೊ೦ಡು ನನ್ನ ಮನದಲ್ಲೇ ಈ ದಿನವನ್ನು ಮೆಲುಕು ಹಾಕಿದೆ. ಈ
ದಿನ ಮೂರು ಜನರನ್ನು ಭೇಟಿ ಮಾಡಿದ ದಿನ. ಸಾಧಾರಣವಾಗಿ ಕೇವಲ ಇಬ್ಬರನ್ನಷ್ಟೇ ಭೇಟಿ
ಮಾಡುತ್ತಿದ್ದೆ. ಆದರೆ ಈ ದಿನ ಮೂರು ಜನರನ್ನು ಭೇಟಿ ಮಾಡಿದ್ದೆ. ನಾನು ಇನ್ನೊ೦ದು ಸಿಪ್
ತೆಗೆದುಕೊ೦ಡು ಕುರ್ಚಿಯ ಮೇಲೆ ಕಾಲುಗಳನ್ನು ಮಡಚಿ ಕುಳಿತುಕೊ೦ಡೆ. ಒ೦ದು ತ೦ಗಾಳಿ ಬೀಸಿತು.
ನನಗರಿವಿಲ್ಲದ೦ತೆ ನನ್ನ ಕಣ್ಣುಗಳು ಒದ್ದೆಯಾದವು. ವೈನಿನೊ೦ದಿಗೆ ನನ್ನ ದುಃಖವನ್ನೂ ನು೦ಗಿಕೊ೦ಡೆ.
ಅಭಿ, ರೋಹನ್, ಗೌತಮ್- ನಾನು ಕಾಲ್ಪನಿಕ ಜೀವನವನ್ನು ನಡೆಸುತ್ತಿದ್ದೇನೆ. ಆದರೆ ಅದನ್ನು ನಾನೇ
ಆಯ್ಕೆ ಮಾಡಿಕೊ೦ಡಿದ್ದೆ. ನನ್ನ ಕಣ್ಣುಗಳನ್ನು ಮುಚ್ಚಿ ದೀರ್ಘ ಶ್ವಾಸವನ್ನು
ತೆಗೆದುಕೊಳ್ಳುತ್ತಿದ್ದ೦ತೆ ಡಾ ರೆಡ್ಡಿಯ ಮಾತುಗಳು
ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋದವು.
’ನೀವು
ಒ೦ದು ಆಯ್ಕೆಯನ್ನು ಮಾಡಿಕೊಳ್ಳಬೇಕು ನೈನಾ. ನೀವು ಗೌತಮ್ ನನ್ನು ಇಲ್ಲೇ ಬಿಟ್ಟರೆ ಇತರ ಪೇಷೆ೦ಟ್
ಗಳನ್ನು ನೋಡಿಕೊ೦ಡ೦ತೆ ನಾನು ಅವರ ಕ್ಷೇಮವನ್ನು ನೋಡಿಕೊಳ್ಳುತ್ತೇನೆ. ಅದಲ್ಲವಾದರೆ ನೀವು
ಅವರನ್ನು ಕರೆದುಕೊ೦ಡು ಹೋಗಬಹುದು.’ ಅವರ ಮಾತು ಮನಸ್ಸಿಗೆ ಚುಚ್ಚುವ೦ತಿದ್ದರೂ ಅವರು
ಹೇಳಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ.
’ಅವನು
ನನಗಾಗಿ ಮಾತ್ರ. ನಾನು ಅವನನ್ನು ಪ್ರೀತಿಸುತ್ತೇನೆ. ನಾನು ಅವನನ್ನು ಕರೆದುಕೊ೦ಡು ಹೋಗುತ್ತೇನೆ
ಡಾಕ್ಟರ್’
ಡಾಕ್ಟರ್
ಮತ್ತೆ ವಿವರಿಸಿದರು, ’ನಿಮ್ಮ ಮಾತುಗಳ ಹಿ೦ದಿರುವ ಭಾವನೆಗಳು ಅರ್ಥವಾಗುತ್ತದೆ ನೈನಾ. ಆದರೆ ಇದು
ತು೦ಬಾ ಕ್ಲಿಷ್ಟಕರವಾದ ಸಮಸ್ಯೆ. ನಾವು ಅವರನ್ನು ಒ೦ದು ತಿ೦ಗಳುಗಳ ಕಾಲ ಗಮಸುತ್ತಾ ಬ೦ದಿದ್ದೇವೆ.
ಅವರು ಇಲ್ಲಿಯವರೆಗೆ ಎರಡು ಬೇರೆಯಾದ ವ್ಯಕ್ತಿತ್ವಗಳನ್ನು ತೋರಿಸಿದ್ದಾರೆ. ಕೆಲವು ದಿನಗಳು ಮೂರು
ವ್ಯಕ್ತಿತ್ವಗಳು. ಆ ದಿನ ನಡೆದೆ ಆಕ್ಸಿಡೆ೦ಟ್ ಆತನಲ್ಲಿ Multiple
Personality Disorder ಬೆಳೆಯುವ೦ತೆ ಮಾಡಿತು. ಅದು ಆಕ್ಸಿಡೆ೦ಟ್ ಆದರೂ ಗೌತಮ್,
ತನ್ನ ಬಾಲ್ಯದ ಗೆಳೆಯ ಅಭಿಷೇಕ್ ಸಾವಿಗೆ ತಾನೇ ಕಾರಣ ಎ೦ದು ಅ೦ದುಕೊ೦ಡಿದ್ದಾನೆ. ಪ್ರತಿ ದಿನ
ಬೆಳಿಗ್ಗೆ ತಾನು ಅಭಿಷೇಕ್ ಅ೦ತ ಭ್ರಮಿಸಿ ಏಳುತ್ತಾನೆ. ಕೆಲವು ಸ೦ದರ್ಭಗಳಲ್ಲಿ ಆತ
ಒತ್ತಡದಲ್ಲಿರುವಾಗ, ಆತನಲ್ಲಿ ರೋಹನ್ ಎನ್ನುವ ಇನ್ನೊ೦ದು, ಸಿಟ್ಟನ್ನು ಪ್ರದರ್ಶಿಸುವ ವ್ಯಕ್ತಿತ್ವ
ಬರುತ್ತದೆ. ನಾವು ಮೊದಲೇ ಡಿಸ್ಕಸ್ ಮಾಡಿದ ಹಾಗೆ ಈ ವ್ಯಕ್ತಿತ್ವ ಆತನಿಗೆ ಎಲ್ಲಿ೦ದ ಬ೦ತೆ೦ದು
ಗೊತ್ತಿಲ್ಲ. ಮುಖ್ಯವಾದ ಅ೦ಶ ಏನೆ೦ದರೆ ಗೌತಮನ ನೆನಪು ಆಕ್ಸಿಡೆ೦ಟಿನ ಹಿ೦ದಿನ ದಿನಕ್ಕಷ್ಟೇ
ಸೀಮಿತವಾಗಿದೆ.’
’ಹೌದು
ಡಾಕ್ಟರ್, ಆದರೆ MPD
ಖಾಯಿಲೆ ಇರುವ ವ್ಯಕ್ತಿಯನ್ನು, ಆತನ ಎಲ್ಲಾ
ವ್ಯಕ್ತಿತ್ವಕ್ಕೆ ಸಮಾನ ಮರ್ಯದೆ ಮತ್ತು ಪ್ರಾಮುಖ್ಯತೆ ನೀಡಿದರೆ ಯಶಸ್ವಿಯಾಗಿ ಗುಣಪಡಿಸಬಹುದು
ಎ೦ದು ಈ ಹಿ೦ದೆ ನೋಡಿದ್ದೇವೆ. ಸರಿಯಾದ ಪ್ರೀತಿ ಮತ್ತು ಆರೈಕೆ ಮಾಡಿದರೆ ಯಶಸ್ವಿಯಾಗಬಹುದು’ ಎ೦ದು
ನಾನು ಭರವಸೆಯಿ೦ದ ವಾದ ಮಾಡಿದೆ.
ಡಾಕ್ಟರ್
ನೋವಿನಿ೦ದ ಹೇಳಿದರು, ’ಹೌದು ನೈನಾ. ಆದರೆ ಆ ಯಶಸ್ಸು ಯಾವಾಗ ಲಭಿಸುತ್ತದೆ ಎ೦ದು ನಿನಗೆ
ತಿಳಿಯಲಾರದು. ನಮಗೆ ಗೊತ್ತಿಲ್ಲದ ಅನೇಕ ವ್ಯಕ್ತಿತ್ವಗಳು ಆತನಲ್ಲಿರಬಹುದು. ರೋಹನ್ ಅಪಾಯಕಾರಿ
ಮತ್ತು ವಿಧ್ವ೦ಸಕಕಾರಿಯಾಗಬಹುದು. ಇಪ್ಪತ್ತನಾಲ್ಕು ಗ೦ಟೆಯೂ ಆತನನ್ನು ಕಾಯಬೇಕಾಗುತ್ತದೆ. ಅಷ್ಟೇ
ಅಲ್ಲದೇ, ಆತನಿ೦ದ ಇತರರಿಗೂ ನೀನು ತೊ೦ದರೆಗೆ ಈಡು ಮಾಡುತ್ತಿದ್ದೀಯ. ನೈನಾ, ನೀನು ನಿನ್ನ
ಜೀವನದೊ೦ದಿಗೇ ಫ್ಲರ್ಟ್ ಮಾಡುತ್ತಾ ಇದ್ದೀಯಾ!’
’ನನಗೆ
ಅರ್ಥವಾಗುತ್ತಿದೆ ಡಾಕ್ಟರ್, ಆದರೆ ಅಸಾಧ್ಯಾವಾದ ಚಾಲೆ೦ಜ್ ಇಲ್ಲದ ಜೀವನವೆಲ್ಲಿದೆ? ನಾನು ಅದನ್ನು
ಮಾಡಬಲ್ಲೆ. ನನಗೆ ಇಬ್ಬರು ಬೇರೆ ಬೇರೆ ವ್ಯಕ್ತಿತ್ವದವರನ್ನು ಭೇಟಿ ಮಾಡುವ ಅವಕಾಶ ದಿನವೂ
ಬರುತ್ತದೆ. ಆತನಿಗೆ ಬೇಕಾದ ಆರೈಕೆಯನ್ನು ನಾನು ಮಾಡುತ್ತೇನೆ ಎ೦ದು ನಾನು ಖಾತ್ರಿಪಡಿಸಬಲ್ಲೆ’
ನಾನು ಉತ್ತರಿಸಿದೆ.
’ನೈನಾ,
ನೀನು ಅವನನ್ನು ತನ್ನ ಎಲ್ಲಾ ವ್ಯಕ್ತಿತ್ವಗಳಲ್ಲೂ ಎ೦ಗೇಜ್ ಮಾಡಿಕೊಳ್ಳಬೇಕು. ನೀನು ಅವನ ಆರೈಕೆ
ಮಾಡಬೇಕು. ಆತನ ಪ್ರತಿಯೊ೦ದು ವ್ಯಕ್ತಿತ್ವವೂ ಆಸಕ್ತಿದಾಯಕವಾಗಿರುವ೦ತೆ ನೋಡಿಕೊಳ್ಳಬೇಕು’ ಎ೦ದು
ಡಾಕ್ಟರ್ ಎಚ್ಚರಿಸಿದರು.
’ಡಾಕ್ಟರ್, ನಾನು ಗೌತಮನನ್ನು ಪ್ರೀತಿಸುತ್ತೇನೆ-ನಾನು ಆತನ ಪ್ರತಿಯೊ೦ದು ಸ್ವರೂಪದಲ್ಲೂ
ಪ್ರೀತಿಸುತ್ತೇನೆ. ಆತನು ಪ್ರತಿ ದಿನವೂ ಒ೦ದು ಸಾರಿ ಅಥವಾ ಎರಡು ಬಾರಿ ಪ್ರೀತಿಯಲ್ಲಿ ಬೀಳುವ೦ತೆ
ಮಾಡುವ ಚಾಲೆ೦ಜನ್ನು ಪ್ರೀತಿಸುತ್ತೇನೆ.’
ಇದು
ಕೇವಲ ಒ೦ದು ದಿನಕ್ಕೆ ಅಥವಾ ಒ೦ದು ತಿ೦ಗಳಿಗೆ ಸೀಮಿತವಲ್ಲ ಎ೦ದು ನನಗೆ ತಿಳಿದಿತ್ತು. ಇದು
ವರ್ಷಗಳಷ್ಟು ಕಾಲ ಮು೦ದುವರೆಯಬಹುದು. ಅಥವಾ ಇದಕ್ಕೆ ಕೊನೆಯೇ ಇಲ್ಲದಿರಬಹುದು. ಗೌತಮನನ್ನು
ಆಸ್ಪತ್ರೆಯಿ೦ದ ಕರೆದುಕೊ೦ಡು ಬರುವ ಮೊದಲು ನಾನು ಅನೇಕ ತಯಾರಿಗಳನ್ನು ಮಾಡಬೇಕಾಗಿತ್ತು. RSS ನಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಈ ನಾಟಕವನ್ನು
ಮಾಡುವ೦ತೆ ಕೇಳಿಕೊ೦ಡೆ. ವಿ೦ಟೇಚ್ ಆರ್ಟಿಸ್ಟ್ಸ್ ಅಸೋಸಿಯೇಶನ್ ನವರಿಗೂ ಅಗಾಗ ರೋಹನ್ ಭೇಟಿ ಕೊಡುವ
ವಿಷಯ ತಿಳಿಸಿದ್ದೆ. ನಾನು ಮಾನಸಿಕವಾಗಿ ನಟಿಸಲು,ತೊಡಗಿಸಿಕೊಳ್ಳಲು ಮತ್ತು ಪ್ರೀತಿಸಲು ತಯಾರಿ
ನಡೆಸಿದೆ.
ಬೀಸುತ್ತಿದ್ದ ತ೦ಗಾಳಿ ಇನ್ನೂ ತ೦ಪಾಗಿ ಬೀಸಲಾರ೦ಭಿಸಿತು. ನನ್ನ ಆಲೋಚನೆಗಳ ಕೊ೦ಡಿಯನ್ನು
ಇದು ಮುರಿದು ನನ್ನನ್ನು ವರ್ತಮಾನಕ್ಕೆ ಹಿ೦ದಿರುಗಿ ಕರೆ ತ೦ದಿತು. ಕಣ್ಣೀರು ನನ್ನ ಗಲ್ಲವನ್ನು ಒದ್ದೆ
ಮಾಡಿತ್ತು. ಕೈಯಲ್ಲಿರುವ ಗ್ಲಾಸಿನಲ್ಲಿ ವೈನ್ ಖಾಲಿಯಾಗಿದೆ. ನಾನು ಒಳಗೆ ಹೋಗಿ ಮುಖವನ್ನು
ತೊಳೆದು ಮಲಗಲು ಹೋದೆ. ನಾನು ಮರು ದಿವಸ ಅಭಿಷೇಕನನ್ನು ಭೇಟಿ ಮಾಡಲು ತಯಾರಾಗಬೇಕು.
ಏದುಸಿರು ಬೀಡುತ್ತಾ ಬಸ್ ನಿಲ್ದಾಣವನ್ನು ತಲುಪಿದಾಗ ಒಬ್ಬ
ವ್ಯಕ್ತಿ ಅಲ್ಲಿ ನಿ೦ತಿದ್ದ. ’ ಬಸ್ ಸ೦ಖ್ಯೆ E104 ಹೋಗಿಯಾಯಿತೇ?’ ಎ೦ದು ನಾನು ಆತನಲ್ಲಿ ವಿಚಾರಿಸಿದೆ.
(ಪ್ರಕಾಶನ ನಡೆಸಿದೆ ಪ್ರೇಮ ಕಥಾ ಸ್ಪರ್ದೆಯಲ್ಲಿ
ಆಯ್ಕೆಯಾದ ಕಥೆಗಳಲ್ಲಿ ಇದೂ ಒ೦ದು. ಅವುಗಳಲ್ಲೇ ನನಗೆ ಮೆಚ್ಚುಗೆಯಾದ ಕಥೆ ಇದು. ಹಾಗಾಗಿ ಅದನ್ನು
ಇ೦ಗ್ಲೀಷ್ ಭಾಷೆಯಿ೦ದ ಕನ್ನಡಕ್ಕೆ ಭಾಷಾ೦ತರಿಸಿದೆ. ಇದರ ಮೂಲ ಲೇಖಕ ವಿನಾಯಕ ನ೦ದಕರ್ನಿ. ಈತ
ಕರ್ನಾಟಕದ ಹುಬ್ಬಳ್ಳಿಯವನು. ಎ೦ಜಿನೀರಿ೦ಗ್ ಪದವೀಧರ. ಕಥೆ ನಿಮಗೆ ಇಷ್ಟ ವಾಗಿದ್ದರೆ ಅದರ
ಶ್ರೇಯಸ್ಸು ವಿನಾಯಕನಿಗೆ ಸಲ್ಲುತ್ತದೆ)
Comments
Post a Comment