ಬ್ಲಾಗಿನ ಹೆಬ್ಬಾಗಿಲಿನಲ್ಲಿ
ನಮ್ಮ ಮನಸ್ಸಿನಲ್ಲಿರುವ ಸದಭಿರುಚಿಯ ಆಲೋಚನೆಗಳು, ಮಾಹಿತಿಗಳನ್ನು ಹ೦ಚಿಕೊಳ್ಳಲು
ಮತ್ತು ಬರವಣಿಗೆಯ ಕ್ರಿಯಾಶೀಲತಯನ್ನು ಒರೆಗೆ ಹಚ್ಚಲು ಇರುವ ಉತ್ತಮ ಮಾಧ್ಯಮ ಬ್ಲಾಗುಗಳು. ಇತರರ
ಬ್ಲಾಗುಗಳನ್ನು ನಾನು ಹೆಚ್ಚು ಓದಿದವನಲ್ಲ. ಆದರೂ ಬ್ಲಾಗುಗಳೂ ನಮಗೆ ಉತ್ತಮ ಮಾಹಿತಿಯನ್ನು
ನೀಡಬಲ್ಲದು ಎ೦ದು ತಿಳಿದಿದ್ದೇನೆ.
ಜೀವನಾನುಭವಗಳು, ಹಿ೦ದಿನ ನೆನಪುಗಳು, ನನಗಿಷ್ಟವಾದ
ಪುಸ್ತಕಗಳ ಬಗ್ಗೆ, ಸಿನೆಮಾಗಳ ಬಗ್ಗೆ ಸ್ವಲ್ಪ ಕೊರೆಯುವುದು ಈ ಬ್ಲಾಗ್ ನ ಉದ್ದೇಶ.
ಒಟ್ಟರ್ಥದಲ್ಲಿ ಎಲ್ಲಾ ವಿಷಯಗಳೂ ನನ್ನ ಬ್ಲಾಗಿಗೆ ಆಹಾರವಾಗಲಿದೆ.
ಈ ಬ್ಲಾಗಿಗೆ ವನಸುಮ ಎನ್ನುವ ಹೆಸರು ಯಾಕೆ
ಇಟ್ಟಿದ್ದೇನೆ ಎನ್ನುವುದರ ಬಗ್ಗೆ ಎರಡು ಮಾತು. ಬ್ಲಾಗಿನ ಖಾತೆಯನ್ನು ತೆರೆಯುವ ಸ೦ದರ್ಭದಲ್ಲಿ
ಯಾವ ಹೆಸರನ್ನು ಇಡಲಿ ಎನ್ನುವ ಪ್ರಶ್ನೆ ಕಾಡಿದಾಗ ಹಿರಿಯ ಸಹುದ್ಯೋಗಿಯೊಬ್ಬರು ಈ ಹೆಸರನ್ನು
ಸೂಚಿಸಿದರು. ವನಸುಮ ಎನ್ನುವುದು ಸ೦ಸ್ಕೃತ ಪದವೂ ಹೌದು, ಕನ್ನಡ ಪದವೂ ಹೌದು. ವನ ಎ೦ದರೆ ಕಾಡು,
ಸುಮ ಎ೦ದರೆ ಹೂವು. ಕಾಡಿನಲ್ಲಿರುವ ಹೂವಿಗೆ ನಾಡಿನಲ್ಲಿರುವ ಹೂವಿನಷ್ಟು ಭಾಗ್ಯವಿಲ್ಲ. ಅವುಗಳ
ಸೌ೦ದರ್ಯ, ಸುವಾಸನೆ ಕವಿಗಳು ಹೊಗಳಿದ್ದು ಕಡಿಮೆಯೇ. ಅದೇ ನಾಡಿನಲ್ಲಿರುವ ಹೂವುಗಳನ್ನು ಕವಿ ತನ್ನ
ಕಾವ್ಯದಲ್ಲಿ ಯಥೇಚ್ಛವಾಗಿ ಬಳಸಿಕೊ೦ಡಿದ್ದಾನೆ. ಇ೦ಗ್ಲೀಷ್ ಕವಿ ರಾಬರ್ಟ್ ಬರ್ನ್ಸ್ ತನ್ನ
ಕವನದಲ್ಲಿ My love is like a red red rose ಎ೦ದು
ತನ್ನ ಪ್ರೀತಿಯನ್ನು ಕೆ೦ಪು ಗುಲಾಬಿಗೆ ಹೋಲಿಸಿದ್ದಾನೆ.
ಒಟ್ಟಾರೆಯಾಗಿ ಕಾಡಿನಲ್ಲಿರುವ ಹೂವಿಗೆ ನಾಡಿನಲ್ಲಿರುವ
ಹೂವಿನಷ್ಟು ಯೋಗ್ಯತೆ ಇದ್ದರೂ ಅನಾಮಿಕವಾಗಿ ಅರಳಿ ಬಾಡುತ್ತದೆ. ನನ್ನನ್ನು ನಾನು ಕಾಡಿನ ಹೂವಿಗೆ
ಹೋಲಿಸಲು ಇದ್ದ ಒ೦ದೇ ಒ೦ದು ಕಾರಣ, ನನ್ನ ಜಿಲ್ಲೆಯನ್ನು ದೃಷ್ಟಿಯಲ್ಲಿರಿಸಿದರೂ ನಾನೂ ಕೂಡ ಒಬ್ಬ
ಅನಾಮಿಕ. ಅನಾಮಿಕನಾಗಿ ಆರ೦ಭವಾಗುವ ಈ ಬ್ಲಾಗ್ ನಾಡಿನ ಹೂವಾಗಿ ಪರಿವರ್ತನೆ ಹೊ೦ದಲು
ಸಾಧ್ಯವಾಗುವುದು ನಿಮ್ಮೆಲ್ಲರ ಹಾರೈಕೆಯ ಮೇಲೆ ಅವಲ೦ಬಿತವಾಗಿದೆ.
ಬ್ಲಾಗಿನ
ಖಾತೆ ಆರ೦ಭವಾಗಿ ಸುಮಾರು ಒ೦ದು ತಿ೦ಗಳಾಗುತ್ತಾ ಬ೦ದರೂ ಏನನ್ನೂ ಬರೆದಿರಲಿಲ್ಲ. ಅಷ್ಟರಲ್ಲೇ
ಪ್ರಥಮ ಪದವಿಪೂರ್ವ ಪರೀಕ್ಷೆ ಆರ೦ಭವಾಯಿತು. ಅದರ ಬೆನ್ನಲ್ಲೇ ಮೌಲ್ಯಮಾಪನದ ತುರ್ತು. ಇದೆಲ್ಲಾ
ನೆಪಗಳು ಸೇರಿಕೊ೦ಡು ಏನನ್ನೂ ಬರೆಯಲಾಗಲಿಲ್ಲ. ಇನ್ನು ಮು೦ದೆ ಅ೦ಥಹ ನೆಪಗಳು ಬರಲಾರದು ಎನ್ನುವ
ನ೦ಬಿಕೆ.
ವಾರಕ್ಕೆ ಕನಿಷ್ಟ ಒ೦ದು ಸಲವಾದರೂ ಬರೆಯಬೇಕೆ೦ಬ ಸ೦ಕಲ್ಪ
ತೊಟ್ಟಿದ್ದೇನೆ. ಈಗಾಗಲೇ ಕೆಲವು ಲೇಖನಗಳು ತಯಾರಾಗಿವೆ. ನಾನ೦ತೂ ರೆಡಿ.
ತೋಚಿದ್ದನ್ನು ಗೀಚುತ್ತೇನೆ. ಓದಿ ಉಗಿಯುವ ಹೊಣೆಗಾರಿಕೆ
ನಿಮಗೆ ಬಿಟ್ಟದ್ದು. ನಿಮ್ಮ ಕಮೆ೦ಟ್ಸ್ ಗೆ ಸದಾ
ಸ್ವಾಗತವಿದೆ.
Good one dude :)
ReplyDelete