ರಾ೦ಚೋಡ್ ನ ಅಧ್ಯಾತ್ಮ
ಒ೦ದು ಕೃತಿಯನ್ನು ಅಥವಾ ಸಿನೆಮಾವನ್ನು ಯಾವ ರೀತಿಯಲ್ಲಿ ವಿಮರ್ಶಿಸಬಹುದು ಎ೦ದು
ಕೇಳಿದರೆ ಅದು ಅವರವರ ದೃಷ್ಟಿಕೋನದ ಮೇಲೆ ಅವಲ೦ಬಿತವಾಗುತ್ತದೆ ಎ೦ದು ಹೇಳಬಹುದು. ಬಾಲಿವುಡ್ ನ
ಬ್ಲಾಕ್ ಬ್ಲಸ್ಟರ್ ಸಿನೆಮಾ ’ತ್ರೀ ಈಡಿಯಟ್ಸ್’ ಬಿಡುಗಡೆಯಾದಾಗ ನಾನು ದ್ವಿತೀಯ ಎ೦.ಎ ಇ೦ಗ್ಲೀಷ್
ಸಾಹಿತ್ಯದ ವಿದ್ಯಾರ್ಥಿಯಾಗಿದ್ದೆ. ಆ ಸಿನೆಮಾ ನೋಡಿದಾಕ್ಷಣ ಒ೦ದು ರೀತಿಯಲ್ಲಿ ಭಾವೋದ್ರೇಕಗೊ೦ಡು
ಅ೦ಕಗಳಿಗಾಗಿ ಏನು ಬೇಕಾದರೂ ಮಾಡಲು ಹೇಸದಿರುವ ನನ್ನ ಕೆಲವು ಸಹಪಾಠಿಗಳ ಬಗ್ಗೆ ಮರುಕಗೊ೦ಡು,
ಅ೦ಕಗಳ ಆಚೆಗೂ ಜೀವನವಿದೆ ಎ೦ದು ಮನಗೊ೦ಡು, ಅ೦ಕಗಳಿಗಾಗಿ ಹಾತೊರೆಯುವುದಿಲ್ಲ ಎ೦ದು ದೃಢ ಸ೦ಕಲ್ಪ ಮಾಡಿದೆ.
ತದನ೦ತರ ಅಧ್ಯಾಪಕನಾಗಿ ವೃತ್ತಿಗೆ ಸೇರಿಕೊ೦ಡ ನ೦ತರ ಆ ಸಿನೆಮಾವನ್ನು ಹಲವಾರು ಬಾರಿ
ವೀಕ್ಷಿಸಿದಾಗ ಇನ್ನೊ೦ದು ದೃಷ್ಟಿಕೋನ ಗೋಚರವಾಗಿ ಸಿನೆಮಾದ ನಾಯಕನ ಪಾತ್ರ ಮಹಾಭಾರತದ ಶ್ರೀ
ಕೃಷ್ಣನ ಪಾತ್ರದೊ೦ದಿಗೆ ಹೋಲಿಕೆಯಾಗುತ್ತದೆ ಎ೦ದೆನಿಸಿ ನಮ್ಮ ಕಾಲೇಜಿನ ವಾರ್ಷಿಕಾ೦ಕಕ್ಕೆ ಅದೇ ವಿಷಯ
ಇಟ್ಟುಕೊ೦ಡು ಲೇಖನ ಬರೆದೆ. ನನ್ನ ಲೇಖನವನ್ನು ನನ್ನ ಮೆಚ್ಚಿನ ಲೇಖಕ ವಸುಧೇ೦ದ್ರರಿಗೆ ಓದಲು
ಕಳಿಸಿದಾಗ, ಅವರು ಅದನ್ನು ಓದಿ, ಕೆಲವು ಕಡೆ ಕೃಷ್ಣನ ಗುಣಗಳನ್ನು ಬಲವ೦ತವಾಗಿ ಸಿನೆಮಾದ ನಾಯಕನ
ಗುಣಗಳೊ೦ದಿಗೆ ಹೋಲಿಸಲಾಗಿದೆ ಎ೦ದರು.
ಅವರ ಅಭಿಪ್ರಾಯ ನಿಜವೇ ಆಗಿರಬಹುದು.
ಇಲ್ಲವಾದರೆ ಅವತಾರ ಸ್ವರೂಪಿ ಕೃಷ್ಣನನ್ನು ಸಾಮಾನ್ಯ ಮನುಷ್ಯನೊ೦ದಿಗೆ ಎಷ್ಟೇ ಹೋಲಿಕೆ
ಮಾಡಲೆತ್ನಿಸಿದರೂ ಅದು ಅಭಾಸವಾಗಿ ಕಾಣುವುದು. ಅದು ಸಹಜವಾಗಿ ಮೂಡಿ ಬರಬೇಕಾದರೆ, ಒ೦ದೇ
ಕೃಷ್ಣನನ್ನು ಮನುಷ್ಯನ೦ತೆ ಕಾಣಬೇಕು, ಅಥವಾ ಸಿನೆಮಾದ ನಾಯಕನನ್ನು ದೈವತ್ವಕ್ಕೆ ಏರಿಸಬೇಕು.
ಆದರೂ ಪ್ರತಿಯೊಬ್ಬರಿಗೂ ಅವರವರ
ದೃಷ್ಟಿಕೋನದಲ್ಲಿ ವಿಮರ್ಶಿಸುವ ಸ್ವಾತ೦ತ್ರ್ಯ ಇದ್ದೇ ಇರುತ್ತದೆ. ಉದಾಹರಣೆಗೆ ಇದೇ ಸಿನೆಮಾವನ್ನು
ಮಹಿಳಾವಾದಿ ವಿಮರ್ಶಕರಿಗೆ ಕೊಟ್ಟರೆ ಹೇಗೆ ವಿಮರ್ಶಿಸುತ್ತಿದ್ದರು ಎ೦ದು ತಮಾಷೆಯಾಗಿ ನೋಡೋಣ.
ವಿಮರ್ಶಕರು ನಾಯಕ ಪಾತ್ರವಾದ ರಾ೦ಚೋಡ್ ದಾಸ್ ಚಾ೦ಚಡ್, ನಾಯಕಿಯನ್ನು ಪ್ರೀತಿಯ ಬಲೆಗೆ ದೂಡಿ
ಕೊನೆಗೆ ಆಕೆಗೆ ಹೇಳದೇ ಆಕೆಯನ್ನು ಬಿಟ್ಟು ಹೋದುದನ್ನು ಖ೦ಡಿಸುತ್ತಿದ್ದರು. ಅಲ್ಲದೆ ರಾ೦ಚೋಡ್ ನ
ಸ್ನೇಹಿತರು ಅವರಿಬ್ಬರ ಪ್ರೇಮ ಸ೦ಬ೦ಧವನ್ನು ಉಳಿಸಲು ಆಕೆಯ ವಿವಾಹವನ್ನು ತಡೆಯುತ್ತಾರೆ. ಆದರೆ ಆ
ಸ೦ದರ್ಭದಲ್ಲಿ ರಾ೦ಚೋಡ್ ನ ಮದುವೆ ಆಗಿದೆಯೋ ಇಲ್ಲವೋ ಎನ್ನುವುದನ್ನು ಅವರು ಖಾತ್ರಿ
ಪಡಿಸಿರುವುದಿಲ್ಲ. ಸ್ತ್ರೀಯನ್ನು ಎಷ್ಟು ಹಗುರವಾಗಿ, ಆಟದ ಬೊ೦ಬೆಯ೦ತೆ ಚಿತ್ರಿಸಿದ್ದಾರೆ ಎ೦ದು ಈ
ಸನ್ನಿವೇಶ ಹೇಳುತ್ತದೆ.
ಚಿತ್ರದ ನಾಯಕಿಗೆ ಒಬ್ಬ ವ್ಯಕ್ತಿಯೊ೦ದಿಗೆ
ನಿಶ್ಚಿತಾರ್ಥ ಆಗಿರುತ್ತದೆ. ಆದರೆ ಆತ ಸ೦ಬ೦ಧಕ್ಕಿ೦ತ ಹಣಕ್ಕೇ ಹೆಚ್ಚು ಬೆಲೆ ಕೊಡುತ್ತಾನೆ ಎ೦ದು
ಚಿತ್ರದ ನಾಯಕ ಆಕೆಗೆ ಮನವರಿಕೆ ಮಾಡಿಕೊಟ್ಟ ಮೇಲೆ ಆಕೆ ಆತನೊ೦ದಿಗಿನ ನಿಶ್ಚಿತಾರ್ಥವನ್ನು
ಮುರಿದುಬಿಡುತ್ತಾಳೆ. ಆದರೆ ನಾಯಕ ರಾ೦ಚೋಡ್ ಆಕೆಗೆ ಹೇಳದೇ ನಿರ್ಗಮಿಸಿದ ಮೇಲೆ, ಆಕೆ ಪರಿಸ್ಥಿತಿಯ
ಒತ್ತಡದಿ೦ದ ಆ ವ್ಯಕ್ತಿಯನ್ನೇ ಮದುವೆಯಾಗಲು ಒಪ್ಪುತ್ತಾಳೆ. ಆದರೆ ಚಿತ್ರದಲ್ಲಿ ಇದಕ್ಕೆ ಹೆಚ್ಚು
ಮಹತ್ವ ನೀಡಲಿಲ್ಲ. ಬದಲಾಗಿ ಮದುವೆಗೆ ತಯಾರಾಗಿ ನಿ೦ತ ಆಕೆಗೆ ರಾ೦ಚೋಡ್ ನ ಸ್ನೇಹಿತರು ಒತ್ತಾಯ
ಮಾಡಿ ಮದುವೆ ಮ೦ಟಪದಿ೦ದ ತಪ್ಪಿಸಿ ಕರೆದುಕೊ೦ಡು ಹೋಗುವವರೆಗೂ, ಆಕೆ ಪ್ರೇಮವನ್ನು ಅಷ್ಟು
ಗ೦ಭೀರವಾಗಿ ಪರಿಗಣಿಸಲಿಲ್ಲ ಎನ್ನುವ೦ತೆ ಬಿ೦ಬಿಸಲಾಗಿದೆ. ಅಲ್ಲದೆ ಆಕೆಯನ್ನು ತೊರೆದು ಬ೦ದರೂ
ಯಾರನ್ನೂ ಮದುವಯಾಗದೇ ಆಕೆಯ ನೆನಪಲ್ಲೇ ಕಾಲ ಕಳೆಯುವ ನಾಯಕನನ್ನು ಆದರ್ಶ ಹೀರೋ ನ೦ತೆ
ಚಿತ್ರಿಸಲಾಗಿದೆ ಎ೦ದು ಹೇಳುತ್ತಿದ್ದರೇನೋ.(ನಿಶ್ಚಿತಾರ್ಥವಾಗಿ ಹತ್ತು ವರ್ಷ ದಾಟಿದರೂ
ಅಲ್ಲಿಯವರೆಗೆ ಚಿತ್ರದ ನಿರ್ದೇಶಕ ಆಕೆಯ ಮದುವೆ ಏಕೆ ಮಾಡಲಿಲ್ಲ ಎನ್ನುವುದು ಕಾಡುವ ಇನ್ನೊ೦ದು
ಪ್ರಶ್ನೆ!)
ಇನ್ನು ಇದೇ ಚಿತ್ರವನ್ನು
ಹದಿಹರೆಯದ ವಿದ್ಯಾರ್ಥಿಗಳಿಗೆ ವಿಮರ್ಶಿಸಲು ಹೇಳಿದರೆ, ಪ್ರತಿಯೊಬ್ಬರು ರಾ೦ಚೋಡ್ ನ ಸ್ಥಾನದಲ್ಲಿ
ತಮ್ಮನ್ನು ಕಲ್ಪಿಸಿಕೊ೦ಡು, ಚಿತ್ರದಲ್ಲಿ ಬರುವ ಡೀನಿನ ಪಾತ್ರವನ್ನು ತಮ್ಮ ಪ್ರಾ೦ಶುಪಾಲರೊ೦ದಿಗೆ
ಹೋಲಿಕೆ ಮಾಡುತ್ತಿದ್ದರೇನೋ! ಆ ಚಿತ್ರವನ್ನು ತಮ್ಮ ಶಿಕ್ಷಕರು/ಅಧ್ಯಾಪಕರು ಮತ್ತು ಹೆತ್ತವರು
ನೋಡಿ ವಿದ್ಯಾರ್ಥಿಗಳಿಗೆ ಅವರು ಎಷ್ಟು ಚಿತ್ರಹಿ೦ಸೆ ಕೊಡುತ್ತಾರೆ ಎ೦ದು ಆಗಲಾದರೂ
ತಿಳಿದುಕೊಳ್ಳಲಿ ಎ೦ದು ಅಪೇಕ್ಷೆ ಪಡುತ್ತಿದ್ದರು.
ನನ್ನ ಅನುಭವಗಳು ಹೆಚ್ಚಿ
ವ್ಯಕ್ತಿತ್ವ ಮತ್ತು ಮನೋಭಾವ ಬದಲಾದ೦ತೆ ಇನ್ನೊ೦ದು ದೃಷ್ಟಿಕೋನದಿ೦ದ ಆ ಚಿತ್ರವನ್ನು
ವಿಮರ್ಶಿಸುವ೦ತೆ ಪ್ರೇರೇಪಿಸುತ್ತಿದೆ. ಅಧ್ಯಾತ್ಮದ ಕಡೆಗೆ ಸ್ವಲ್ಪ ಆಸಕ್ತಿ ಹೆಚ್ಚಿ ಅದರ ಪ್ರಭಾವ
ನನ್ನ ಮೇಲೆ ಬೀರಿ, ಮನುಷ್ಯನ ಯಶಸ್ಸಿಗೆ ಅಧ್ಯಾತ್ಮದ ವ್ಯಕ್ತಿತ್ವ ತು೦ಬಾ ಸಹಕಾರಿಯಾಗುತ್ತದೆ
ಎ೦ದು ನ೦ಬಿದ್ದೇನೆ. ಈ ನಿಟ್ಟಿನಲ್ಲಿ ’ಅಧ್ಯಾತ್ಮ ವ್ಯಕ್ತಿತ್ವ ಮತ್ತು ಪ್ರಾಪ೦ಚಿಕ ಯಶಸ್ಸು’
ಎನ್ನುವ ವಿಷಯದ ಮೇಲೆಯೂ ಈ ಚಿತ್ರವನ್ನು ವಿಮರ್ಶಿಸಬಹುದು.
ನಮ್ಮ ಸುತ್ತಮುತ್ತಲೂ ನಾಲ್ಕು
ವಿಧವಾದ ವ್ಯಕ್ತಿಗಳಿರುತ್ತಾರೆ. ಮೊದಲನೆಯ ಹ೦ತದವರದು unconscious
incompetence. ಸ್ಪರ್ದಾತ್ಮಕ ಜಗತ್ತಿನಲ್ಲಿ ಇವರು ಎಲ್ಲಿಯೂ ಸಲ್ಲುವುದಿಲ್ಲ. ಅಷ್ಟೇ ಅಲ್ಲ. ಆ
ವಿಷಯದ ಅರಿವೂ ಅವರಿಗೆ ಇರುವುದಿಲ್ಲ. ಕೇವಲ ಮೋಜು, ಮಸ್ತಿ ಮಾಡಿ ದಿನ ದೂಡುತ್ತಾರೆ. ಎರಡನೆಯ ಹ೦ತ
conscious incompetence. ಇವರಿಗೆ
ತಾವು ಸ್ಪರ್ದೆಯಲ್ಲಿ ಹಿ೦ದೆ ಬಿದ್ದಿದ್ದೇವೆ ಎನ್ನುವ ಅರಿವು ಇರುತ್ತದೆ. ಹಾಗಾಗಿ ಸಾಕಷ್ಟು ಶ್ರಮ
ಪಡಲೂಬಹುದು. ಈ ಹ೦ತವನ್ನೂ ದಾಟಿ ಬ೦ದರೆ ಮೂರನೆಯ ಹ೦ತ conscious
competence. ಸ್ಪರ್ದೆಯ ರೇಸಿನಲ್ಲಿ ಇವರಿರುತ್ತಾರೆ. ಆದರೆ ಇವರಿಗೆ ಸದಾ ಇವರ ಪ್ರತಿ
ಸ್ಪರ್ದಿಗಳ ಚಿ೦ತೆ. ಅವರ ಬಗ್ಗೆ ಹೊಟ್ಟೆ ಕಿಚ್ಚೂ ಇರುತ್ತದೆ. ಕೊನೆಯ ಹ೦ತ unconscious competence. ಇವರು ಸ್ಪರ್ದೆಯಲ್ಲಿ ಇರುತ್ತಾರೆ. ಆದರೆ ತಾನು ಇತರರೊ೦ದಿಗೆ
ಸ್ಪರ್ದೆಯಲ್ಲಿದ್ದೇನೆ ಎನ್ನುವ ಭಾವ ಇವರನ್ನು ಕಾಡುವುದಿಲ್ಲ. ತಮಗಿಷ್ಟವಾದ ಕೆಲಸಗಳನ್ನು ಮಾಡಿ
ಅದರಲ್ಲಿ ಯಶಸ್ವಿಯಾಗಿ ಸದಾ ಸ೦ತೋಷವಾಗಿರುತ್ತಾರೆ. ಇವರ ಪ್ರತಿಸ್ಪರ್ದಿಗಳಿಗೆ ಇವರ ಬಗ್ಗೆ
ಹೊಟ್ಟೆ ಕಿಚ್ಚಿರುತ್ತದೆ. ತಾವು ಗೆಲ್ಲಬೇಕಾದರೆ ಇತರರು ಸೋಲಲೇಬೇಕಿಲ್ಲ ಎನ್ನುವ ಭಾವ ಇವರದು.
ಈ ನಾಲ್ಕು ರೀತಿಯ ವ್ಯಕ್ತಿತ್ವಗಳನ್ನು
’ತ್ರೀ ಈಡಿಯಟ್ಸ್’ ಸಿನೆಮಾದಲ್ಲೂ ಕಾಣಬಹುದು. ಮೊದಲನೆಯ ವರ್ಗಕ್ಕೆ ಸೇರಿದವನು ರಾ೦ಚೋಡನ ಸ್ನೇಹಿತದ್ವಯರಲ್ಲೊಬ್ಬ.
ಆತ ಉತ್ತಮ ಛಾಯಾಗ್ರಾಹಕ. ಆತನಿಗೆ ವೈಲ್ದ್ ಲೈಫ಼್ ಪೋಟೋಗ್ರಾಫ಼ರ್ ಆಗಬೇಕೆನ್ನುವ ಆಸೆ ಇರುತ್ತದೆ.
ಆದರೆ ತ೦ದೆಯ ಒತ್ತಾಯದಿ೦ದ ಎ೦ಜಿನೀಯರಿ೦ಗ್ ಸೇರುತ್ತಾನೆ. ಇಲ್ಲಿ ಆತನಿಗೆ ಯಶಸ್ಸು ಸಿಗುವುದಿಲ್ಲ.
ರಾ೦ಚೋಡನ ಸ್ನೇಹವಿದ್ದರೂ ಇದರಿ೦ದ ಆತನಿಗೆ ಪಠ್ಯಕ್ಕೆ ಸ೦ಬ೦ಧಪಟ್ಟ ವಿಷಯದಲ್ಲಿ ಯಾವ ರೀತಿಯ ಲಾಭವೂ
ದೊರಕಿದ೦ತೆ ಕಾಣುವುದಿಲ್ಲ. ಆದರೆ ಆತ ಅದ್ಯಾವುದರ ಪರಿವೆಯೇ ಇಲ್ಲದೇ ರಾ೦ಚೋಡನ ಮಾತಿನ ಪ್ರಭಾವಕ್ಕೆ
ಒಳಗಾಗುತ್ತಾನೆ. ಆದರೆ ರಾ೦ಚೋಡನಷ್ಟು ಬುದ್ಧಿವ೦ತಿಕೆ ತನಗಿಲ್ಲ ಎನ್ನುವುದು ತಿಳಿಯುವುದು ಮೊದಲ
ಸೆಮೆಸ್ಟರಿನ ಫಲಿತಾ೦ಶ ಬ೦ದಾಗ.
ಎರಡನೇ ವರ್ಗಕ್ಕೆ ಸೇರಿದವನು
ರಾ೦ಚೋಡಿನ ಇನ್ನೊಬ್ಬ ಸ್ನೇಹಿತ ರಾಜು. ಮನೆಯಲ್ಲಿ ಆರ್ಥಿಕ ಕಷ್ಟವಿದೆ. ಆದರೂ ಈತನನ್ನು
ಎ೦ಜಿನೀಯರಿ೦ಗ್ ವಿದ್ಯಾಭ್ಯಾಸಕ್ಕೆ ಕಳಿಸಿದ್ದಾರೆ. ಈತನಿಗೋಸ್ಕರ ತನ್ನ ಮನೆಯವರು
ಕಷ್ಟಪಡುತ್ತಿದ್ದಾರೆ ಎನ್ನುವ ಗಿಲ್ಟ್ ಫೀಲಿ೦ಗ್ ಈತನಿಗೆ
ಸದಾ ಕಾಡುತ್ತದೆ. ತನ್ನ ಭಯಗಳನ್ನು ಗೆಲ್ಲಲು ಕೈಗಳಿಗೆ ಉ೦ಗುರಗಳನ್ನು ಧರಿಸಿದ್ದಾನೆ.
ಯಾರನ್ನಾದರೂ ಮೆಚ್ಚುಗೆ ಗಳಿಸಿಯಾದರೂ ಸರಿಯೇ, ತಾನು ಎ೦ಜಿನೀಯರಿ೦ಗ್ ಉತ್ತಮ ರೀತಿಯಲ್ಲಿ
ಉತ್ತೀರ್ಣನಾಗಿ ಮನೆಯ ಆರ್ಥಿಕ ಸ೦ಕಷ್ಟಕ್ಕೆ ನೆರವಾಗಬೇಕೆನ್ನುವುದೇ ಆತನ ಧ್ಯೇಯ. ಹಾಗಾಗಿ ಆತ
ಡೈರಕ್ಟರಿನ ಸಲಹೆಯ೦ತೆ, ರಾ೦ಚೋಡ್ ನ ಸ್ನೇಹದಿ೦ದ ತಾನು ಉದ್ಧಾರ ಆಗೋದಿಲ್ಲ ಎ೦ದು ನಿರ್ಧರಿಸಿ
ರೂಮನ್ನು ಬದಲಿಸುತ್ತಾನೆ.
ಮೂರನೇ ವರ್ಗಕ್ಕೆ ಸೇರಿದವನು ರಾ೦ಚೋಡಿನ ಸಹಪಾಠಿ ಚತುರ್ ರಾಮಲಿ೦ಗಮ್. ಈತ ಸ್ವಾರ್ಥಿ.
ತಾನೇ ಸದಾ ಗೆಲ್ಲಬೇಕೆನ್ನುವ ಲೋಭ. ರಾ೦ಚೋಡ್ ಮತ್ತು ಆತನ ಸ್ನೇಹಿತರನ್ನು ಕ೦ಡರೆ ಬೆಟ್ಟದಷ್ಟು
ಕೋಪ. ರಾ೦ಚೋಡ್ ತರಗತಿಗೆ ಮೊದಲಿಗನಾದರೆ ಈತ ಎರಡನೇ ಸ್ಥಾನದಲ್ಲಿರುತ್ತಾನೆ. ಹಾಗಾಗಿ ರಾ೦ಚೋಡ್ ನ
ಬಗ್ಗೆ ಹೊಟ್ಟೆ ಉರಿ. ಶಿಕ್ಷಕರ ದಿನಾಚರಣೆಯ ದಿನ ತನ್ನನ್ನು ಅವಮಾನಿಸಿದಕ್ಕೆ ಸಿಟ್ಟು ಮತ್ತು
ದುಃಖದಿ೦ದ ರಾ೦ಚೋಡ್ ನನ್ನು ಪ೦ಥ್ಯಕ್ಕೆ ಆಹ್ವಾನಿಸುತ್ತಾನೆ. ಇನ್ನು ಹತ್ತು ವರ್ಷಗಳ ನ೦ತರ
ಭೇಟಿಯಾಗು. ಆಗ ನಮ್ಮಿಬ್ಬರ ಸ್ಥಾನಮಾನ ಹೇಗಿರುತ್ತದೆ ಎ೦ದು ನೋಡಿಯೇ ಬಿಡೋಣ ಎನ್ನುತ್ತಾನೆ.
ಆಶ್ಚರ್ಯವೆ೦ದರೆ ಹತ್ತು ವರ್ಷಗಳ ನ೦ತರವೂ ಅದನ್ನು ನೆನಪಿನಲ್ಲಿ ಇಟ್ಟುಕೊ೦ಡಿರುತ್ತಾನೆ.
ಕೊನೆಯ ವರ್ಗಕ್ಕೆ ಸೇರಿದವನು ರಾ೦ಚೋಡ್. ಈತ ಎಲ್ಲಾ ಸ್ಪರ್ದೆಗಳಿಗೂ ಅತೀತ. ಯಾವ
ಸ್ನೇಹಿತರಿಗೆ ಬೇಕಾದರೂ ಸ್ವಾರ್ಥವಿಲ್ಲದೇ ಸಹಾಯ ಮಾಡಬಲ್ಲ.
ತನ್ನ ಸ್ನೇಹಿತ ಮರಳಿ ರೂಮಿಗೆ ಬರುವ೦ತೆ ಮಾಡಲು, ರಾಮಲಿ೦ಗಮ್ ನ ಹೆಸರು ಕೆಡಿಸಲು ಶಿಕ್ಷಕರ
ದಿನಾಚರಣೆಗೆ ಆತ ಓದಲಿರುವ ಭಾಷಣವನ್ನು ಬದಲಿಸುತ್ತಾನೆ. ಹಿ೦ದಿ ಸರಿಯಾಗಿ ಬಾರದ ಚತುರ್ ಅದನ್ನು
ಓದಿ ಅಪಹಾಸ್ಯಕ್ಕೀಡಾಗುತ್ತಾನೆ. ಚತುರ್ ತಾನು ತರಗತಿಗೆ ಮೊದಲಿಗನಾಗಬೇಕು ಎನ್ನುವ ಸ್ವಾರ್ಥ
ಉದ್ದೇಶವನ್ನು ಪೂರೈಸುವುದಕ್ಕೋಸ್ಕರ, ಇತರ ವಿದ್ಯಾರ್ಥಿಗಳ ಮನಸನ್ನು ಕೆಡಿಸಲು ಪರೀಕ್ಷೆಯ ಹಿ೦ದಿನ
ದಿನ ಅಶ್ಲೀಲ ಚಿತ್ರಗಳಿರುವ ಮ್ಯಾಗಜಿನ್ ಗಳನ್ನು ಹ೦ಚುತ್ತಾನೆ. ಅದನ್ನು ಕ೦ಡ ರಾ೦ಚೋಡ್ ಆತನಿಗೆ
ಬುದ್ಧಿ ಕಲಿಸಲು ಭಾಷಣ ಬದಲಿಸಿದ್ದು.
ಆ ಒ೦ದು ಪ್ರಕರಣವೊ೦ದು ಬಿಟ್ಟರೆ ರಾ೦ಚೋಡ್ ಚತುರ್ ನೊ೦ದಿಗೆ ಯಾವ ರೀತಿಯಲ್ಲೂ ಸೇಡು
ತೀರಿಸಿಕೊಳ್ಳಲು ಹೋಗುವುದಿಲ್ಲ. ತಾನು ತರಗತಿಗೆ ಮೊದಲಿಗನಾಗಿದ್ದೇನೆ ಎನ್ನುವ ಅಹ೦ ಕೂಡಾ
ಆತನಿಗಿರುವುದಿಲ್ಲ. ಶಿಕ್ಷಣ ಮತ್ತು ಪರೀಕ್ಷೆಯ ವ್ಯವಸ್ಥೆ ಬದಲಾಗಬೇಕು ಎನ್ನುವುದು ಆತನ
ಅಭಿಪ್ರಾಯ. ತಮ್ಮ ಸ್ಥಾನಕ್ಕನುಸಾರವಾಗಿ ಗ್ರೂಪ್ ಫೋಟೋ ಗೆ ನಿಲ್ಲುವುದು ಆತನಿಗೇಕೋ ಬೇಸರದ
ಸ೦ಗತಿ. ಯಾಕೆ೦ದರೆ ಸ್ನೇಹಿತರ ಜೊತೆಗೆ ಫೋಟೋಗೆ ನಿಲ್ಲುವ ಅವಕಾಶವಿಲ್ಲ.
ಆತನ ಒಬ್ಬ ಸ್ನೇಹಿತನನ್ನು ಆತ ಇಷ್ಟಪಟ್ಟಿರುವ ಪೋಟೋಗ್ರಫಿ ಕ್ಷೇತ್ರಕ್ಕೆ ಹೋಗುವ೦ತೆ
ಹುರಿದು೦ಬಿಸುತ್ತಾನೆ. ಆತನ ಇನ್ನೊಬ್ಬ ಸ್ನೇಹಿತ ಸ್ವಾಭಿಮಾನದಿ೦ದ ಸ೦ದರ್ಶನ ಎದುರಿಸಿ ಕೆಲಸ
ಗಿಟ್ಟಿಸಿಕೊಳ್ಳುವುದಕ್ಕೆ ಪ್ರೇರಣೆಯಾಗುತ್ತಾನೆ. ಇವರಿಬ್ಬರ ಉದ್ಧಾರಕ್ಕೆ ತಾನೇ ಕಾರಣ ಎ೦ದು
ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಬದಲಾಗಿ ಫೋಟೋಗ್ರಾಫರ್ ಆದ ತನ್ನ ಸ್ನೇಹಿತ ಬರೆದ ಪುಸ್ತಕಗಳನ್ನು
ಹೆಮ್ಮೆಯಿ೦ದ ತನ್ನ ವಿದ್ಯಾರ್ಥಿಗಳಿಗೆ ತೋರಿಸುತ್ತಾನೆ. ಇನ್ನೊಬ್ಬ ಸ್ನೇಹಿತನ ಬ್ಲಾಗುಗಳನ್ನೂ
ನಿಯಮಿತವಾಗಿ ಓದುತ್ತಿರುತ್ತಾನೆ.
ರಾ೦ಚೋಡ್
ಅನೇಕ ಸ೦ಶೋಧನೆಗಳನ್ನು ಮಾಡಿ ಪೇಟೆ೦ಟ್ ಪಡೆದುಕೊ೦ಡಿರುತ್ತಾನೆ. ಆದರೆ ತನ್ನ ಸ್ನೇಹಿತರ ಪಾಲಿಗೂ
ಅನಾಮಿಕನಾಗಿ ಉಳಿಯುತ್ತಾನೆ. ಬಹುಷಃ ಈ ಕಾಲದಲ್ಲಿ ಸ್ವಾಮೀಜಿಗಳು ಕೂಡ ಹೆಸರು, ಕೀರ್ತಿಗಾಗಿ
ಹಾತೊರೆಯುತ್ತಾರೆ. ಅ೦ಥವರ ಮಧ್ಯೆ ರಾ೦ಚೋಡ್ ನಿಜವಾದ ಅರ್ಥದಲ್ಲಿ ಯೋಗಿ ಎನ್ನಿಸಿಕೊಳ್ಳುತ್ತಾನೆ.
ಎಲ್ಲಿಯವರೆಗೆ ಎ೦ದರೆ ಚತುರ್ ರಾಮಲಿ೦ಗಮ್ ತನ್ನ ವೃತಿಯಲ್ಲಿ ಯಶಸ್ಸು ಸಾಧಿಸಲು ರಾ೦ಚೋಡ್ ನೇ
ಕಾರಣೀಕರ್ತನಾಗುತ್ತಾನೆ. ಆದರೆ ರಾ೦ಚೋಡಿನ ಹೆಸರಿನಲ್ಲಿ ಎ೦ಜಿನಿಯರಿ೦ಗ್ ಮಾಡಿದವನ ನಿಜವಾದ ಹೆಸರು
ಫುನ್ ಸುಕ್ ವಾ೦ಗ್ಡು ಎ೦ದು ಚತುರ್ ಗೆ ತಿಳಿದಿರುವುದಿಲ್ಲ. ರಾ೦ಚೋಡ್ ಕೇವಲ ಸ್ಕೂಲ್ ಮೇಷ್ಟ್ರು
ಎ೦ದು ತಮಾಷೆ ಮಾಡುತ್ತಾನೆ. ಆದರೆ ಚತುರನ ಔದ್ಯೋಗಿಕ ಯಶಸ್ಸು ಫುನ್ ಸುಕ್ ವಾ೦ಗ್ಡೋನೊ೦ದಿಗಿನ
ಒಪ್ಪ೦ದದ ಮೇಲೆ ಅವಲ೦ಬಿತವಾಗಿರುತ್ತದೆ.
ಈ ರೀತಿಯಲ್ಲಿ ರಾ೦ಚೋಡನ ಪಾತ್ರವನ್ನು ಚಿತ್ರೀಕರಿಸಲಾಗಿದೆ. ರಾ೦ಚೋಡನ ಸ್ನೇಹಿತರೂ ಕೂಡಾ
ತಮ್ಮ ತಮ್ಮ ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಕ೦ಡು ಇದ್ದುದರಲ್ಲಿಯೇ
ನೆಮ್ಮದಿಯಲ್ಲಿರುತ್ತಾರೆ. ಇದೇ ಸಿನೆಮಾದ ಬಹುಮುಖ್ಯ ಅ೦ಶ. ನಮ್ಮಲ್ಲಿ ಎಷ್ಟು ಐಶ್ವರ್ಯ ಇದೆ
ಎನ್ನುವುದಕ್ಕಿ೦ತ ಇದ್ದುದರಲ್ಲಿಯೇ ನಾವು ಎಷ್ಟು ಸ೦ತೋಷಪಡುತ್ತೇವೆ ಎನ್ನುವುದೇ ಮುಖ್ಯ.
ಆದರೆ ಚತುರ್ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವ
ಜಾಯಮಾನದವನಲ್ಲ. ತನ್ನಲ್ಲಿರುವ ಆಸ್ತಿ ಇತರರ ಕಣ್ಣುರಿಗೆ ಕಾರಣವಾಗಬೇಕು ಎನ್ನುವ ವಿಲಕ್ಷಣ ಮನೋಭಾವದವ
ಈತ. ಸಿನೆಮಾದ ಕ್ಲೈಮಾಕ್ಸನಲ್ಲೂ ಈತ ತನ್ನ ಸ್ಥಿತಿಗೆ ಅಹ೦ಕಾರದಿ೦ದ ವರ್ತಿಸುತ್ತಾನೆ. ಕೊನೆಗೆ ಆತ
ಸೋಲೊಪ್ಪಿಕೊಳ್ಳುತ್ತಾನೆ ಎನ್ನುವುದು ಬೇರೆ ಮಾತು.
ರಾ೦ಚೋಡ್
ಕೇವಲ ಒಳ್ಳೆಯ ವ್ಯಕ್ತಿ ಎ೦ದ ಮಾತ್ರಕ್ಕೆ ಸಿನೆಮಾ ವೀಕ್ಷಕರ ನೆನಪಿನಲ್ಲಿ ಉಳಿಯುವುದಿಲ್ಲ.
ಒಳ್ಳೆಯತನದ ಜೊತೆಗೆ ತನ್ನಲ್ಲಿರುವ ಯೋಗ್ಯತೆಯನ್ನು ಇತರರನ್ನು ಸೋಲಿಸಲು ಉಪಯೋಗಿಸುವುದಿಲ್ಲ.
ತನ್ನಲ್ಲಿ ಯೋಗ್ಯತೆ ಮಾತ್ರ ಇದ್ದರೆ ಇತರರು ತಮ್ಮನ್ನು ಮೆಚ್ಚಿಕೊಳ್ಳುವುದಿಲ್ಲ ಎನ್ನುವ ಮಾತಿಗೆ
ಉದಾಹರಣೆಯಾಗಿ ಎ೦ಜಿನಿಯರಿ೦ಗ್ ಕಾಲೇಜಿನ ಡೀನ್ ಮತ್ತು ಚತುರ್ ರಾಮಲಿ೦ಗಮ್ ಕ೦ಡುಬರುತ್ತಾರೆ. ಕೇವಲ
ಒಳ್ಳೆಯತನದಿ೦ದ ಏನನ್ನೂ ಸಾಧಿಸಲಾಗುವುದಿಲ್ಲ ಎನ್ನುವುದಕ್ಕೆ ಕಲಿಕೆಯಲ್ಲಿ ಹಿ೦ದೆ ಉಳಿದಿದ್ದ
ರಾ೦ಚೋಡ್ ನ ಸ್ನೇಹಿತರು ಸಾಕ್ಷಿಯಾಗುತ್ತಾರೆ. ತನ್ನ ಯೋಗ್ಯತೆ ಮತ್ತು ಒಳ್ಳೆಯತನ ಇವೆರಡರಿ೦ದ
ವಿರೋಧಿಗಳನ್ನೂ ಮೆಚ್ಚಿಸಬಹುದು ಎನ್ನುವುದಕ್ಕೆ ರಾ೦ಚೋಡ್ ಮಾದರಿಯಾಗಿ ಕಾಣುತ್ತಾನೆ. ಯಶಸ್ಸಿನ ಮದ
ಏರದ, ಹೆಸರಿಗಾಗಿ ಹಾತೊರೆಯದ, ಬೇರೆಯವರ ಯಶಸ್ಸಿನಲ್ಲಿ ತನ್ನ ಸ೦ತೋಷ ವ್ಯಕ್ತಪಡಿಸುವ, ತನ್ನ
ವಿರೋಧಿಯೊ೦ದಿಗೆ ಸೇಡು ತೀರಿಸಿಕೊಳ್ಳದ, ಬದಲಾಗಿ ಅವನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುವ
ರಾ೦ಚೋಡ್(ಫುನ್ ಸುಕ್ ವಾ೦ಗ್ಡು) ಎನ್ನುವ ಅಧ್ಯಾತ್ಮ ವ್ಯಕ್ತಿಯ ಮಾದರಿ ಪಾತ್ರ ಕೇವಲ
ಸಿನೆಮಾದಲ್ಲಿ ಮಾತ್ರ ಇರಲು ಸಾಧ್ಯ, ಆದರೆ ನಿಜ ಜೀವನದಲ್ಲಿ ಇರಲು ಅಸಾಧ್ಯ ಎ೦ಬ ಸಿನಿಕತನದ ಮಾತು
ಬ೦ದೀತು. ಯಾಕೆ ಸಾಧ್ಯವಿಲ್ಲ ಎನ್ನುವುದು ಧನಾತ್ಮಕ ಚಿ೦ತನೆಗೆ ನಾ೦ದಿ.

Comments
Post a Comment