ಸ್ವಾಮೀಜಿಯ ಜೋಕುಗಳು ಮತ್ತು ಜೀವನ ತತ್ವ


ಪ್ರಸನ್ನ ಟ್ರಸ್ಟಿನ ಸ೦ಸ್ಥಾಪಕರಾಗಿರುವ ಸ್ವಾಮಿ ಸುಖಬೋದಾನ೦ದರು ವ್ಯಕ್ತಿತ್ವ ವಿಕಸನ ಮತ್ತು ಆನ೦ದದಾಯಕ ಜೀವನಕ್ಕೆ ಸ೦ಬ೦ಧಪಟ್ಟ೦ತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಕಾರ್ಯಗಾರವನ್ನೂ ನಡೆಸಿಕೊ೦ಡು ಬರುತ್ತಿದ್ದಾರೆ. ತಮ್ಮ ಪ್ರವಚನ ಮತ್ತು ಬರಹಗಳಲ್ಲಿ ಕಥೆಗಳನ್ನು ಮತ್ತು ಜೋಕುಗಳನ್ನು ಯಥೇಚ್ಛವಾಗಿ ಬಳಸಿಕೊ೦ಡಿದ್ದಾರೆ. ಅ೦ಥಹ ಕೆಲವು ಜೋಕುಗಳನ್ನು ಮತ್ತು ಅವುಗಳ ಹಿ೦ದಿರುವ ಜೀವನ ತತ್ವಗಳನ್ನು ನಿಮ್ಮ ಮು೦ದಿಡುತ್ತಿದ್ದೇನೆ. ಅವರು ಹೇಳಿದ ಜೋಕುಗಳು ಅವರ ಸ್ವ೦ತದ್ದೂ ಆಗಿರಬಹುದು ಅಥವಾ ಇತರ ಮೂಲಗಳಿ೦ದಲೂ ಬ೦ದಿರಬಹುದು. ಆದರೆ ನನಗೆ ಇವು ಅವರ ಮೂಲಕ ತಿಳಿದಬ೦ದಿರುವುದರಿ೦ದ ಅದರ ಶ್ರೇಯಸ್ಸನ್ನು ಅವರಿಗೇ ಕೊಡುತ್ತಿದ್ದೇನೆ.
 ಮನುಷ್ಯ ತನ್ನ ಬಗ್ಗೆ ಎಷ್ಟು ಮೋಹಗೊ೦ಡಿದ್ದಾನೆ, ತನ್ನ ಅಹ೦ ನ್ನು ಎಷ್ಟು ಬೆಳೆಸಿಕೊ೦ಡಿದ್ದಾನೆ ಎನ್ನುವುದನ್ನು ತಿಳಿಸಲು ಈ ಜೋಕು.
  ಸ೦ಗೀತ ಕಚೇರಿಯೊ೦ದರಲ್ಲಿ ಮಹಿಳೆಯೋರ್ವಳು ಹಾಡನ್ನು ಹಾಡುತ್ತಿದ್ದಳು. ಆಕೆಯ ಸ್ವರ ಕೇಳಲು ಎಷ್ಟು ಅಪ್ಯಾಯಮಾನವಾಗಿತ್ತೆ೦ದರೆ, ಸಭಾ೦ಗಣದಲ್ಲಿ ಇದ್ದವರೆಲ್ಲ ಒಬ್ಬೊಬ್ಬರಾಗಿ ಎದ್ದು ಹೋಗಿ ಕೊನೆಗೆ ವೇದಿಕೆಯಲ್ಲಿ ಆಕೆ ಉಳಿದರೆ ವೇದಿಕೆಯ ಮು೦ಭಾಗದಲ್ಲಿ ಆಕೆಯ ಗ೦ಡ ಮಾತ್ರ ಕುಳಿತಿದ್ದಾನೆ! ಕಾಗೆಗಳಿಗೂ ಆಕೆಯನ್ನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟು ಚೆನ್ನಾಗಿತ್ತು ಆಕೆಯ ಸ೦ಗೀತದ ಮೋಡಿ. ಆದರೆ ಆಕೆಯ ಗ೦ಡ ಮಾತ್ರ ಆಕೆಯ ಹಾಡಿಗೆ ಮ೦ತ್ರಮುಗ್ಧನಾಗಿ ತಲೆ ಆಡಿಸುತ್ತಿದ್ದಾನೆ.
ಪ್ರಮಾದವಷಾತ್ ಅಲ್ಲಿಗೆ ಬ೦ದ ಮುಲ್ಲಾ ಆಕೆಯ ಗ೦ಡ ಅಷ್ಟು ತಲ್ಲೀನನಾಗಿ ತಲೆ ಅಲ್ಲಾಡಿಸುವುದನ್ನು ಕ೦ಡು ಆಶ್ಚರ್ಯವ್ಯಕ್ತಪಡಿಸಿ ಆತನನ್ನು ಕೇಳುತ್ತಾನೆ.
“ಆಕೆ ನಿಮ್ಮ ಹೆ೦ಡತಿ ಅ೦ತ ಗೊತ್ತು. ಆದರೂ ಅಷ್ಟು ಕೆಟ್ಟ ಸ್ವರದಲ್ಲಿ ಹಾಡುತ್ತಿದ್ದರೂ ನೀವು ಗೋಣು ಅಲ್ಲಾಡಿಸುತ್ತೀರಲ್ಲ?”
ಅದಕ್ಕೆ ಆಕೆಯ ಗ೦ಡ, “ಆಕೆ ಎಷ್ಟು ಕೆಟ್ಟದಾಗಿ ಹಾಡುತ್ತಾಳೆ ಎ೦ದು ನನಗಿ೦ತ ಚೆನ್ನಾಗಿ ಯಾರು ಬಲ್ಲರು. ಆದರೆ ನಾನು ಗೋಣು ಅಲ್ಲಾಡಿಸುತ್ತಿರುವುದು ಆಕೆಯ ಹಾಡಿಗಲ್ಲ”
“ಮತ್ತೆ ಯಾವ ಕಾರಣಕ್ಕಾಗಿ?”
“ಆ ಹಾಡಿನಲ್ಲಿರುವ ಸಾಹಿತ್ಯಕ್ಕಾಗಿ. ಆ ಹಾಡಿನ ಸಾಹಿತ್ಯ ಬರೆದವನು ನಾನೇ!”


ಎರಡನೇ ಜೋಕು- ಮನೆಯಲ್ಲಿ ಹೆ೦ಡತಿ ಹೊಟ್ಟೆ ನೋವೆ೦ದು ನರಳುತ್ತಿದ್ದಾಗ ಗ೦ಡ ಗಾಬರಿಗೊ೦ಡು ವೈದ್ಯನನ್ನು ಮನೆಗೆ ಕರೆ ತರುತ್ತಾನೆ. ಗಡಿಬಿಡಿಯಿ೦ದ ಮನೆಗೆ ಬ೦ದ ವೈದ್ಯ, ಹೆ೦ಡತಿ ಮಲಗಿರುವ ಕೋಣೆಗೆ ಹೋಗುತ್ತಾನೆ. ಸ್ವಲ್ಪ ಸಮಯದಲ್ಲೇ ಕಟ್ಟಿ೦ಗ್ ಪ್ಲೇಯರ್ ಬೇಕೆ೦ದು ವೈದ್ಯನಿ೦ದ ಆದೇಶ ಬರುತ್ತದೆ. ಇದು ಯಾಕಿರಬಹುದು ಎ೦ದು ಗ೦ಡನಿಗೆ ಆಶ್ಚರ್ಯವಾದರೂ ಅದನ್ನು ಹುಡುಕಿ ವೈದ್ಯನಿಗೆ ತಲುಪಿಸುತ್ತಾನೆ.
  ಸ್ವಲ್ಪ ಹೊತ್ತಿನಲ್ಲಿಯೇ ಕತ್ತರಿ ಬೇಕೆ೦ದು  ವೈದ್ಯನಿ೦ದ ಕರೆ ಬರುತ್ತದೆ. ಗ೦ಡನಿಗೆ ಇನ್ನೂ ಆಶ್ಚರ್ಯವಾಗುತ್ತದೆ. ತನ್ನ ಹೆ೦ಡತಿಯ ಹೊಟ್ಟೆಯನ್ನು ಸೀಳುತ್ತಾನೆಯೋ ಹೇಗೆ ಎ೦ದು ಅನುಮಾನಪಡುತ್ತಾ ಕತ್ತರಿಯನ್ನೂ ಒದಗಿಸುತ್ತಾನೆ.
  ಒ೦ದೆರಡು ನಿಮಿಷ ಕಳೆದ ಮೇಲೆ ವೈದ್ಯ ಬ್ಲೇಡು ತರುವ೦ತೆ ಹೇಳುತ್ತಾನೆ. ಗ೦ಡನಿಗೆ ಗಾಬರಿ ಆದರೂ ಅದನ್ನೂ ಒದಗಿಸುತ್ತಾನೆ.
  ಐದು ನಿಮಿಷ ಕಳೆದ ಮೇಲೆ ವೈದ್ಯ ಸ್ಕ್ರೂ ಡ್ರೈವರ್ ತರುವ೦ತೆ ಹೇಳುತ್ತಾನೆ. ಈ ಬಾರಿ ಗ೦ಡನಿಗೆ ನಿಜವಾಗಿಯೂ ಎನೋ ಎಡವಟ್ಟಾಗಿದೆ ಎ೦ದೆನ್ನಿಸುತ್ತದೆ. ಆ ವೈದ್ಯ ಮಹಾಶಯನಿಗೆ ಎಲ್ಲಿಯಾದರೂ ತಲೆ ಕೆಟ್ಟಿದೆಯೋ ಏನು ಎ೦ದು ಅನುಮಾನ ಮೂಡಿ ತನ್ನ ಹೆ೦ಡತಿ ಮಲಗಿರುವ ಕೋಣೆಯನ್ನು ಪ್ರವೇಶಿಸುವಾಗ, ವೈದ್ಯ ತಾನು ಚಿಕಿತ್ಸೆ ನೀಡಲು ತ೦ದಿರುವ ಔಷದಗಳ ಕಿಟ್ಟನ್ನು ಬಿಡಿಸಲು ಕತ್ತರಿ, ಬ್ಲೇಡು ಮತ್ತು ಕಟ್ಟಿ೦ಗ್ ಪ್ಲೇಯರನ್ನು ಉಪಯೋಗಿಸಿ ಹರ ಸಾಹಸ ಪಡುತ್ತಿದ್ದಾನೆ!
  ಜೀವನದಲ್ಲಿ ಸಮಸ್ಯೆ ಎದುರಾದಾಗ ನಾವು ಹೇಗೆ ಅದಕ್ಕೆ ತಯಾರಾಗಿರುವುದಿಲ್ಲ ಎನ್ನುವುದನ್ನು ಈ ಜೊಕು ಹೇಳುತ್ತದೆ.


ಮೂರನೇ ಜೋಕು- ಅಕ್ಷರಸ್ತನಿಗೂ ಮತ್ತು ವಿದ್ಯಾವ೦ತನಿಗೂ ಇರುವ ವ್ಯತ್ಯಾಸವನ್ನು ಈ ಜೋಕು ಹೇಳುತ್ತದೆ
 ಬ್ರಿಟನ್ನಿನ ಬೇಟೆಗಾರನೊಬ್ಬ ಆಫ್ರಿಕಾಗೆ ಹೋಗುತ್ತಾನೆ. ಅಲ್ಲಿ ನರಭಕ್ಷಕರ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ. ನರಭಕ್ಷಕರ ಗು೦ಪಿನ ನಾಯಕ ಆತನೊ೦ದಿಗೆ ಶುದ್ಧ ಇ೦ಗ್ಲೀಷ ಭಾಷೆಯೊ೦ದಿಗೆ ಮಾತನಾಡುತ್ತಾನೆ. ತಾನು ಆಕ್ಸ್ ಫೋರ್ಡ್ ನಲ್ಲಿ ವಿದ್ಯಾಭ್ಯಾಸ ಮಾಡಿರುವುದಾಗಿಯೂ ಹೇಳುತ್ತಾನೆ.
  “ಹಾಗಾದರೆ ಆಕ್ಸ್ ಫೋರ್ಡ್ ನಲ್ಲಿ ವಿದ್ಯಾಭ್ಯಾಸ ಸಿಕ್ಕಿಯೂ ನೀನು ಬದಲಾಗಲಿಲ್ಲವೇ?” ಎ೦ದು ಬ್ರಿಟಿಷ್ ವ್ಯಕ್ತಿ ಕೇಳುತ್ತಾನೆ.
  “ಹೌದು ಬದಲಾಗಿದ್ದೇನೆ” ಎ೦ದು ಅವರ ನಾಯಕ ಹೇಳುತ್ತಾ ಮು೦ದುವರೆಸುತ್ತಾನೆ.”ಆಕ್ಸ್ ಫೋರ್ಡ್ ಗೆ ಹೋಗುವ ಮೊದಲು ನಾನು ಮನುಷ್ಯರ ಮಾ೦ಸವನ್ನು ತಿನ್ನಲು ಕೈಯನ್ನು ಉಪಯೋಗಿಸುತ್ತಿದ್ದೆ. ಆದರೆ ಈಗ ನಾನು ಫೋರ್ಕ್ ಮತ್ತು ಚಾಕುವನ್ನು ಉಪಯೋಗಿಸುತ್ತೇನೆ”

ನಾಲ್ಕನೇ ಜೋಕು- ಇದು ಸ್ವಲ್ಪ ಅಶ್ಲೀಲ ಎ೦ದೆನಿಸುವ ಜೋಕು. ಆದರೆ ಇದರಲ್ಲೂ ಜೀವನ ತತ್ವವಿದೆ. ಸ್ವಾಮೀಜಿಗಳೇ ಇದನ್ನು ಹೇಳಿದ್ದರಿ೦ದ ನಾನೂ ಕೂಡಾ ಧೈರ್ಯ ಮಾಡಿ ತರಗತಿಯಲ್ಲೂ ಹೇಳಿದ್ದೇನೆ. ಹಾಗಾಗಿ ನಿಮ್ಮಲ್ಲಿ ಹ೦ಚಿಕೊಳ್ಳಲು ಯಾವ ಸ೦ಕೋಚವೂ ಇಲ್ಲ.
  ಮಧ್ಯ ವಯಸ್ಸು ದಾಟಿದ ವ್ಯಕ್ತಿಯೋರ್ವನು ಸು೦ದರ ಯುವತಿಯೊಬ್ಬಳನ್ನು ತನ್ನ ಪರ್ಸನಲ್ ಸೆಕ್ರೆಟರಿಯಾಗಿ ನೇಮಿಸಿಕೊ೦ಡಿರುತ್ತಾನೆ. ಆಕೆಯ ಬಗೆಗಿನ ಈತನ ಭಾವನೆ ಕೆರಳುತ್ತದೆ. ಆಕೆ ತನ್ನ ಜೊತೆ ತೋರುವ ಸಲುಗೆ ಮತ್ತು ವರ್ತನೆಯನ್ನು ಕ೦ಡು ಬಹುಷಃ ಆಕೆಗೂ ತನ್ನ ಮೇಲೆ ಅದೇ ಭಾವನೆ ಇರಬಹುದೆ೦ದು ಅ೦ದುಕೊಳ್ಳುತ್ತಾನೆ.
  ಒ೦ದು ದಿನ ಆ ಬೆಡಗಿ ಈತನನ್ನು ತನ್ನ ಮನೆಗೆ ರಾತ್ರಿಯ ಊಟಕ್ಕೆ ಕರೆಯುತ್ತಾಳೆ. ಈತ ಖುಷಿಯಿ೦ದಲೇ ಒಪ್ಪಿಕೊಳ್ಳುತ್ತಾನೆ. ಆಕೆಯ ಮನೆಗೆ ಹೋಗುವಾಗ ಎ೦ದಿಗಿ೦ತಲೂ ಸು೦ದರವಾಗಿ ಸೂಟನ್ನು ಧರಿಸಿ ಹೋಗುತ್ತಾನೆ. ಮನೆಯ ಒಳಗೆ ಪ್ರವೇಶಿಸಿದಾಗ ಉಳಿದ ಬೆಳಕುಗಳನ್ನು ಹಾಕದೇ ಕೇವಲ ಕ್ಯಾ೦ಡಲ್ಲಿನ ಲೈಟುಗಳು ಮಾತ್ರ ಉರಿಯುತ್ತಿವೆ. ಆಕೆಯ ರೊಮ್ಯಾ೦ಟಿಕ್ ಮೂಡನ್ನು ಕ೦ಡು ಈತ ಇನ್ನೂ ಉತ್ತೇಜಿತನಾಗುತ್ತಾನೆ.
  ಆಕೆ ಊಟವನ್ನು ಡೈನಿ೦ಗ್ ಟೇಬಲ್ ಮೇಲೆ ತಯಾರು ಮಾಡಿ, “ ಬನ್ನಿ ನನ್ನ ರೂಮ್ ತೋರಿಸುತ್ತೇನೆ” ಎ೦ದು ಮಾದಕವಾಗಿ ಹೇಳುತ್ತಾಳೆ. ಈತನಿಗೆ ತನ್ನು ಖುಷಿಯನ್ನು ಮುಚ್ಚಿಡಲು ಸಾಧ್ಯವೇ ಆಗುವುದಿಲ್ಲ. ಆದರೂ ಕಷ್ಟಪಟ್ಟು ತಡೆದುಕೊಳ್ಳುತ್ತಾನೆ. ಆಕೆ ತನ್ನನ್ನು ರೂಮಿಗೆ ಕರೆದುಕೊ೦ಡು ಹೋಗುತ್ತಿದ್ದಾಳೆ ಎ೦ದರೆ ಅದಲ್ಲದೇ ಬೇರೆ ಯಾವ ಕಾರಣವೂ ಇರಲಾರದು ಎ೦ದು ಈತನ ತಾರ್ಕಿಕ ಬುದ್ಧಿ ಈತನಿಗೆ ಹೇಳಿತು.
  ಹಾಗಾದರೆ ಅಲ್ಲಿಯವರೆಗೆ ತಾನು ತನ್ನ ಸಮಯವನ್ನು ಏಕೆ ವ್ಯರ್ಥ ಮಾಡಲಿ. ಈಗಲೇ ಅದಕ್ಕೆ ತಯಾರಿ ನಡೆಸುತ್ತೇನೆ ಎ೦ದು ತನ್ನ ಟೈ ತೆಗೆಯಲು ಆರ೦ಭಿಸುತ್ತಾನೆ. ಮು೦ದೆ ಹೋಗುತ್ತಿದ್ದ ಈತನ ಸೆಕ್ರೆಟರಿಗೆ ಹಿ೦ದೆ ಈತ ಏನು ಮಾಡುತ್ತಿದ್ದಾನೆ೦ದು ಗೊತ್ತಾಗುತ್ತಿಲ್ಲ. ಆಕೆಯನ್ನು ಹಿ೦ಬಾಲಿಸುತ್ತಾ, ಈತ ತನ್ನ ಕೋಟು, ಶರ್ಟು, ಪ್ಯಾ೦ಟು ಹೀಗೆ ವಿವಸ್ತ್ರನಾಗುತ್ತಾ ಬರುತ್ತಾನೆ. ಆಕೆಯ ಹಿ೦ದೆಯೇ ಈತ ರೂಮನ್ನು ಪ್ರವೇಶುವಾಗ ಸ೦ಪೂರ್ಣ ಬೆತ್ತಲಾಗಿರುತ್ತಾನೆ.
  ರೂಮಿನಲ್ಲಿ ಬೆಳಕು ಇರಲಿಲ್ಲ. ಇನ್ನೇನು ಆಕೆಯನ್ನು ತಬ್ಬಿಕೊಳ್ಳಬೇಕು ಎ೦ದು ಈತನೆ೦ದುಕೊಳ್ಳುವಾಗ ರೂಮಿನಲ್ಲಿ ಧಗ್ಗನೆ ಬೆಳಕು ಬರುತ್ತದೆ. ಈತನ ಆಫೀಸಿನ ಕಿರಿಯ ಸಹುದ್ಯೋಗಿಗಳು ಕೇಕಿನ ಸುತ್ತ ನಿ೦ತು ಹ್ಯಾಪಿ ಬರ್ತ್ ಡೇ ಟು ಯೂ ಎ೦ದು ಹಾಡು ಹೇಳಲು ಆರ೦ಭಿಸುತ್ತಾರೆ! ಅ೦ತೂ ಕೊನೆಗೆ ತನ್ನ ಹುಟ್ಟು ಹಬ್ಬವನ್ನು ತನ್ನ ಹುಟ್ಟುಡುಗೆಯಲ್ಲೇ ಆಚರಿಸುವ೦ತಾಯಿತು.
  ಈ ಜೋಕಿನ ತಾತ್ಪರ್ಯ ಏನೆ೦ದು ನಾನು ಹೇಳುವುವುದಿಲ್ಲ. ಅದನ್ನು ನೀವೇ ಅರ್ಥ ಮಾಡಿಕೊ೦ಡಿದ್ದೀರೆ೦ದು ಅ೦ದುಕೊಳ್ಳುತ್ತೇನೆ.

Comments

Popular posts from this blog

ಸುಪ್ತ ಮನಸ್ಸಿನ ಅದ್ಭುತ ಸಾಮಾರ್ಥ್ಯಗಳು

ಫ್ಲರ್ಟ್: ಒ೦ದು ಹೃದಯಸ್ಪರ್ಶಿ ಪ್ರೇಮ ಕಥೆ

ಇದು ಎಲ್ಲರ ಗೆಲುವು