ಜೀವನದ ಏಕತಾನತೆಯಿಂದ ಹೊರಬರುವುದು ಹೇಗೆ?

ಚಿಕ್ಕವರಿರುವಾಗ ಬೆಟ್ಟವನ್ನೇ ಕಡಿಯುತ್ತೇನೆ ಎನ್ನುವ ಉತ್ಸಾಹ, ಚೈತನ್ಯ ಒಂದು ವಯಸ್ಸಿಗೆ ಬಂದ ಮೇಲೆ ವಾಸ್ತವದ ಅರಿವಾಗಿ ಜೀವನದ ಜಂಜಾಟವನ್ನು ಎದುರಿಸುವುದರಲ್ಲೇ ಕಳೆಯಲಾರಂಭಿಸುತ್ತೇವೆ. ನಮ್ಮ ಯೋಗ್ಯತೆ, ನಿರೀಕ್ಷೆಗನುಗುಣವಾಗಿ ಉದ್ಯೋಗ ಪಡೆದು ಅದರಲ್ಲೇ ತೃಪ್ತಿ ಹೊಂದಿ,ತಿಂಗಳ ಕೊನೆಯವರೆಗೆ ಮನೆಯ ಖರ್ಚು ವೆಚ್ಚಕ್ಕೆ, ಸ್ವಲ್ಪ ಧೈರ್ಯ ಮಾಡಿ ಸಾಲ ಮಾಡಿದರೆ, ಅದರ ಇಎಂಐ ಗೆ ಸರಿ ಹೊಂದುವಷ್ಟು ಆದಾಯ ಬಂದರೆ ಅಷ್ಟು ಸಾಕು ಅನ್ನುವಷ್ಟರ ಮಟ್ಟಿಗೆ ನಮ್ಮ ಜೀವನ ಸ್ಥಾವರವಾಗುತ್ತದೆ. ಆರಕ್ಕೇರದಿದ್ದರೂ ಮೂರಕ್ಕಿಳಿಯದಿದ್ದರೆ ಸಾಕು ಅನ್ನುವ ಎಚ್ಚರಿಕೆಯಿಂದಲೇ ನೂರಕ್ಕೆ ಎಂಭತ್ತರಷ್ಟು ಜನ ಯಾವುದೇ ಹೊಸ ಸಾಹಸಕ್ಕೆ ಕೈ ಹಾಕದೆ ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತೇವೆ. ಅಥವಾ ಹಾಗೆಂದುಕೊಳ್ಳುತ್ತೇವೆ. ಒಂದು ನಿರ್ದಿಷ್ಟ ಗುರಿಯಿಲ್ಲದೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡಿ, ಕೊನೆಗೆ ಹಿಂದಿರುಗಿ ನೋಡಿದಾಗಲೇ ಗೊತ್ತಾಗುವುದು, ಜೀವನ ಎಷ್ಟೊಂದು ರೊಟೀನ್ ಆಗಿದೆಯಲ್ಲ ಎಂದು.
ಈ ಏಕತಾನತೆಯ ಜೀವನ ಅದೆಷ್ಟೋ ಜನರಿಗೆ ಅಭ್ಯಾಸವಾಗಿ ಅದರಿಂದ ಹೊರಬರಲೂ ಕೂಡ ಅವರ ಕಂಫರ್ಟ್ ಜೋನ್ ಬಿಡುವುದಿಲ್ಲ. ಜೀವನ ಇಷ್ಟೇ ಅನ್ನುವ ಅಭಿಪ್ರಾಯಕ್ಕೆ ಬಂದುಬಿಟ್ಟು ಬದುಕಿದ್ದಷ್ಟು ದಿನ ದಿನ ದೂಡುವುದೇ ಜೀವನ ಅನ್ನುವ ಮನಸ್ಥಿತಿ ಹಲವರಾಗಿರುತ್ತದೆ. ನಿಮ್ಮದೂ ಅಂಥಹ ಮನಸ್ಥಿತಿ ಆಗಿರದೇ, ಜೀವನದಲ್ಲಿ ಏಕತಾನತೆಯನ್ನು ಅನುಭವಿಸಿ ಅದರಿಂದ ಹೊರಬರಲು ಏನು ಮಾಡಬೇಕು ಎಂದು ತಿಳಿಯಬೇಕಾದರೆ ಮುಂದೆ ಓದಿ.



ನಿಮ್ಮ ಇಷ್ಟದ ಹವ್ಯಾಸವನ್ನು ಬೆಳಸಿಕೊಳ್ಳಿ:- ಚಿಕ್ಕವರಿರುವಾಗ ಅಥವಾ ವಿದ್ಯಾರ್ಥಿಗಳಾಗಿದ್ದಾಗ ಹಣ ಸಂಪಾದನೆಯ ಯಾವ ಒತ್ತಡವೂ ಇಲ್ಲದೇ, ನಿಮ್ಮ ಇಷ್ಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತೀರಿ. ಆದರೆ ಉದ್ಯೋಗಕ್ಕೆ ಸೇರಿದ ಮೇಲೆ ಅಥವಾ ನಿಮ್ಮದೇ ವ್ಯವಹಾರವನ್ನು ನಡೆಸಲು ಆರಂಭಿಸಿದ ಮೇಲೆ,ಅಥವಾ ಮದುವೆಯಾಗಿ ಗಂಡನ ಮನೆ ಸೇರಿದ ಮೇಲೆ ನಿಮಗೆ ಆನಂದ ನೀಡುವ ಎಲ್ಲಾ ಚಟುವಟಿಕೆಗಳಿಂದ ವಿಮುಖರಾಗಿರುತ್ತೀರಿ. ಉದ್ಯೋಗ ಅಥವಾ ವ್ಯವಹಾರದ ಒತ್ತಡದಿಂದಲೋ, ಮನೆಯ ಜವಾಬ್ದಾರಿಯ ನೆಪದಿಂದಲೋ ನಿಮ್ಮ ಆಸಕ್ತಿಯ ಕೆಲಸವನ್ನು ತ್ಯಾಗ ಮಾಡಿರುತ್ತೀರಿ.
ಇತರರಿಗೋಸ್ಕರ ನಿಮ್ಮ ಸಂತೋಷವನ್ನು ತ್ಯಾಗ ಮಾಡುತ್ತಿದ್ದೇನೆ ಅನ್ನುವುದು ನಿಮಗೆ ತಾತ್ಕಾಲಿಕವಾಗಿ ತೃಪ್ತಿ ಕೊಡಬಹುದಾದರೂ, ಮುಂದೊಂದು ದಿನ ನೀವು ಮಾಡಿರುವ ತ್ಯಾಗದ ಬಗ್ಗೆಯೂ ಪಶ್ಚಾತ್ತಾಪ ಪಡುವ ಸಂದರ್ಭ ಬರಬಹುದು. ನೀವು ಯಾರಿಗೂ ತ್ಯಾಗ ಮಾಡುವ ಅಗತ್ಯವಿಲ್ಲ. ಒಂದು ವೇಳೆ ನಿಜವಾಗಿಯೂ ನೀವು ನಿಮ್ಮ ಆತ್ಮೀಯರ ಸಂತೋಷವನ್ನು ಬಯಸುತ್ತೀರೆಂದಾದರೆ ಮೊದಲು ನೀವು ಸಂತೋಷವಾಗಿರಬೇಕು. ನಿಮ್ಮಲ್ಲಿ ಸಂತೋಷ ಇದ್ದರಷ್ಟೇ ಅದನ್ನು ಇತರರಿಗೂ ಹಂಚಲು ಸಾಧ್ಯ.
ನಿಮ್ಮ ಕೆಲಸದ ಒತ್ತಡ ಎಷ್ಟೇ ಇದ್ದರೂ ನಿಮ್ಮ ಹವ್ಯಾಸಕ್ಕನುಗುಣವಾಗಿ ದಿನಕ್ಕೆ ಅಥವಾ ವಾರಕ್ಕೊಂದಿಷ್ಟು ಸಮಯವನ್ನು ಮೀಸಲಿಟ್ಟು ಅದಕ್ಕೆ ಸರಿಯಾಗಿ ಉಳಿದ ಜವಾಬ್ದಾರಿಯನ್ನು ನಿರ್ವಹಿಸಿ. ನಿಮ್ಮ ಹವ್ಯಾಸ ಓದು ಬರವಣಿಗೆಯಾಗಿರಬಹುದು, ಅಥವಾ ಆಟೋಟವಾಗಿರಬಹುದು, ಹಾಗೆಯೇ ಕ್ರಿಯಾಶೀಲತೆಯನ್ನು ಹೆಚ್ಚಿಸುವಂಥಹ ಯಾವುದೇ ಚಟುವಟಿಕೆಯಾಗಿರಬಹುದು. ಆದ್ಯತೆಗೆ ಅನುಸಾರವಾಗಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಸಮಯ ನಿಮ್ಮ ಹವ್ಯಾಸಕ್ಕೆ ನೀಡಿ.

ಒಂದು ಗುರಿಯನ್ನು ನಿಗದಿ ಮಾಡಿ:- ಪ್ರತಿ ದಿನ ನೀವು ಎಷ್ಟೇ ಚಟುವಟಿಕೆಯಿಂದ ಕೂಡಿದರೂ ನೀವು ಯಾವ ಕೆಲಸವನ್ನು ಮಾಡಲಿದ್ದೀರಿ ಅನ್ನುವ ಯೋಜನೆ ಇಲ್ಲದಿದ್ದರೆ ನಿಮ್ಮ ಏಳಿಗೆ ತಟಸ್ಥವಾಗುತ್ತದೆ. ನಿಮ್ಮ ಜೀವನದಲ್ಲಿ ಏನಾದರೊಂದು ಗುರಿಯನ್ನು ನಿಗದಿ ಮಾಡಿದರೆ, ಆ ಗುರಿಯನ್ನು ತಲುಪಲು ನೀವು ಕೈಗೊಳ್ಳುವ ಎಲ್ಲಾ ಚಟುವಟಿಕೆಗಳು ನಿಮಗೆ ಖುಷಿ ತರುತ್ತದೆ. ಅದು ಒಂದು ಹೊಸ ಕೌಶಲವನ್ನು ಕಲಿಯುವುದಾಗಿರಬಹುದು, ತೂಕ ಇಳಿಸಿಕೊಳ್ಳುವುದಾಗಿರಬಹುದು, ಅಥವಾ ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದಾಗಿರಬಹುದು. ನಿಮ್ಮ ಗುರಿ ಏನೇ ಇದ್ದರೂ, ಅದನ್ನು ಬರೆದಿಟ್ಟುಕೊಂಡು, ಅದನ್ನು ತಲುಪಲು ಪ್ರತಿ ದಿನ ಮಾಡಬೇಕಾಗಿರುವ ಚಟುವಟಿಕೆ ಹಾಗೂ ತಯಾರಿಯ ಬಗ್ಗೆ ಮಾದಲೇ ಯೋಜನೆ ರೂಪಿಸಿಕೊಂಡು ಕಾರ್ಯಪ್ರವೃತ್ತರಾದರೆ, ನಿಮ್ಮ ದಿನಚರಿ ಹೊಸ ಹುರುಪಿನಿಂದ ಕೂಡಿರುತ್ತದೆ.



ಹಳೆಯ ಸಂಬಂಧಗಳನ್ನು ಮತ್ತೆ ಚಿಗುರಿಸಿ- ನಿಮಗೆ ಅನೇಕ ಜನರ ಪರಿಚಯ ಇರಬಹುದು. ಆದರೆ ನಿಮ್ಮ ಬಾಲ್ಯ ಸ್ನೇಹಿತರು, ನಿಮಗೆ ಕಲಿಸಿದ ಗುರುಗಳು, ಸಹಪಾಠಿಗಳನ್ನು ನೆನಪಿಸಿಕೊಂಡಾಗ ನಿಮ್ಮ ಮನಸ್ಸು ಹಿಂದಿನ ದಿನಗಳನ್ನು ನೆನೆದು ಮುದಗೊಳ್ಳುತ್ತದೆ. ಯೌವನದ ದಿನಗಳನ್ನು ನೆನಪಿಸಿಕೊಂಡಾಗ ನಿಮ್ಮ ಮನಸ್ಸು ಮತ್ತು ದೇಹ ಎರಡಕ್ಕೂ ಆ ದಿನಗಳ ಚೈತನ್ಯ ಮರಳಿ ಬಂದಂತಾಗುತ್ತದೆ.

ಎಷ್ಟೋ ವರ್ಷಗಳ ಹಿಂದೆ ನಿಮ್ಮ ಜೊತೆ ಆತ್ಮೀಯ ಸಂಬಂಧವನ್ನು ಹೊಂದಿ ಕಾಲದ ಪರಿಣಾಮದಿಂದ ಒಬ್ಬರನ್ನೊಬ್ಬರು ಸಂಪರ್ಕಿಸದೇ ಹೋದರೆ, ಅವರಿಗೆ ಕರೆ ಮಾಡಿ ಮಾತನಾಡಿ. ಅವರೇ ಆಗಿ ಕರೆ ಮಾಡಲಿಲ್ಲ, ನಾನ್ಯಾಕೆ ಮಾಡಲಿ ಎನ್ನುವ ಮನೋಭಾವ ಬೇಡ. ಏಕೆಂದರೆ ಅವರೂ ಕೂಡ ನಿಮ್ಮಂತೆ ಜೀವನದ ಜಂಜಾಟದಲ್ಲಿ ಸಿಲುಕಿಕೊಂಡವರು. ನೀವು ನಿಮಗೋಸ್ಕರ ಕರೆ ಮಾಡುವುದೆಂದು ಭಾವಿಸಿ ಕರೆ ಮಾಡಿ. ಒಂದು ವೇಳೆ ನಿಮ್ಮ ಕರೆಯಿಂದ ಅವರಿಗೂ ಸಂತೋಷವಾದರೆ ನಿಮ್ಮ ಸಂತೋಷ ಇಮ್ಮಡಿಯಾಗುತ್ತದೆ. ಅವರಲ್ಲಿ ಅಂಥಹ ಯಾವ ಭಾವನೆಯೂ ವ್ಯಕ್ತವಾಗುತ್ತಿಲ್ಲ ಎಂದಾದರೆ ಯಾವುದೇ ಚಿಂತೆಯಿಲ್ಲ. ನಿಮಗಿನ್ನೂ ಅಂಥಹ ಅನೇಕ ಸ್ನೇಹಿತರಿರುತ್ತಾರೆ. ಹಾಗೆಂದ ಮಾತ್ರಕ್ಕೆ ನಿಮ್ಮ ಸಂತೋಷ ಅವರ ಪ್ರತಿಕ್ರಿಯೆಯ ಮೇಲೆಯೇ ಅವಲಂಬಿತವಾಗಬೇಕೆಂದಿಲ್ಲ. ನೀವು ಕೇವಲ ನಿಮ್ಮ ಸಂತೋಷಕ್ಕೆ ಅವರನ್ನು ಸಂಪರ್ಕಿಸಿದ್ದೀರಿ ಅನ್ನುವ ಸ್ಪಷ್ಟತೆ ನಿಮಗಿದ್ದರೆ ಸಾಕು.
ಸಾಧ್ಯವಾದರೆ ನಿಮ್ಮ ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕಲು  ಸ್ನೇಹಿತರೆಲ್ಲ ಒಂದು ಕಡೆ ಸೇರುವ ಯೋಜನೆ ರೂಪಿಸಿ. ಅದು ಕೇವಲ ಒಬ್ಬ ಸ್ನೇಹಿತರಾಗಿರಬಹುದು, ಅಥವಾ ಸ್ನೇಹಿತರ ಗುಂಪಾಗಿರಬಹುದು. ಇದನ್ನು ಸ್ವತಃ ನೀವೇ ಕಾರ್ಯಗೊತಗೊಳಿಸಬಹುದು, ಅಥವಾ ಆ ಕಾರ್ಯ ಮಾಡುವ ಸ್ನೇಹಿತರಿಗೆ ನೀವು ಹಿನ್ನಲೆಯಲ್ಲಿ ನೆರವಾಗಬಹುದು.

ನಿಮ್ಮ ದಿನಚರಿಯಲ್ಲೂ ಭಿನ್ನತೆಯನ್ನು ರೂಢಿಸಿಕೊಳ್ಳಿ:- ನಾವೆಲ್ಲರೂ ಪ್ರತಿ ದಿನ ತಿಂಡಿ ತಿನ್ನುತ್ತೇವೆ. ಊಟ ಮಾಡುತ್ತೇವೆ. ಇದು ನಮ್ಮ ದಿನಚರಿ. ಇದನ್ನು ನಾವು ತಪ್ಪಿಸಿಕೊಳ್ಳುವ ಹಾಗಿಲ್ಲ. ಆದರೆ ತಿನ್ನುವ ತಿಂಡಿಯಲ್ಲಿ ನಾವು ಬದಲಾವಣೆ ಮಾಡಬಹುದು. ಪ್ರತಿ ದಿನ ದೋಸೆಯೇ ತಿನ್ನಬೇಕೆಂದಿಲ್ಲ. ಒಂದು ವೇಳೆ ನಿಮಗೆ ಉಪಾಹಾರ ಗ್ರಹಗಳಲ್ಲಿ ತಿನ್ನುವ ಅನಿವಾರ್ಯತೆ ಇದ್ದರೆ ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡುವುದಾಗಿರಬಹುದು, ಅಥವಾ ಒಂದೇ ಉಪಾಹಾರ ಗ್ರಹದಲ್ಲಿ ತಿನ್ನದೇ ಆಗಾಗ ಬದಲಿಸುತ್ತಿರುವುದನ್ನು ಮಾಡಬಹುದು.
ಹಾಗೆಯೇ ಪ್ರತಿ ದಿನ ನಿಮ್ಮ ಮನೆಯಿಂದ ನಿಮ್ಮ ಉದ್ಯೋಗ ಸ್ಥಳಕ್ಕೆ ತಲುಪಲು ಒಂದಕ್ಕಿಂತ ಹೆಚ್ಚು ದಾರಿಗಳಿದ್ದರೆ ನಿಮ್ಮ ಸಮಯ ಹೆಚ್ಚು ವ್ಯರ್ಥವಾಗದಿದ್ದರೆ ದಾರಿಯನ್ನು ಸ್ವಲ್ಪ ಬದಲಾವಣೆ ಮಾಡಿ ಹೋಗಿ ಬರುವುದು ಮಾಡಬಹುದು. ಹೀಗೆ ಮಾಡುವುದರಿಂದಲೂ ನೀವು ಏಕತಾನತೆಯಿಂದ ತಪ್ಪಿಸಿಕೊಳ್ಳಬಹುದು. ಇದನ್ನು ನಿಮ್ಮ ದಿನಚರಿಯ ಇತರ ಚಟುವಟಿಕೆಗಳಲ್ಲೂ ಅಳವಡಿಸಿಕೊಳ್ಳಬಹುದು. ಇದರಿಂದ ನಿಮ್ಮ ಕ್ರಿಯಾತ್ಮಕ ಶಕ್ತಿಯೂ ಹೆಚ್ಚುತ್ತದೆ.
ಕೇವಲ ಹಣಗಳಿಕೆಯನ್ನಷ್ಟೇ ಕೇಂದ್ರವಾಗಿಡದೇ ನಮಗೆ ಖುಷಿ ಕೊಡುವ ,ಆರ್ಥಿಕವಾಗಿ ಯಾವುದೇ ಲಾಭವಿಲ್ಲದಿದ್ದರೂ ಏಕತಾನತೆಯಿಂದ ಹೊರಬರಲು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಜೀವನವನ್ನು ಚೆನ್ನಾಗಿ ಅನುಭವಿಸಬಹುದು.

Comments

Popular posts from this blog

ಸುಪ್ತ ಮನಸ್ಸಿನ ಅದ್ಭುತ ಸಾಮಾರ್ಥ್ಯಗಳು

ಫ್ಲರ್ಟ್: ಒ೦ದು ಹೃದಯಸ್ಪರ್ಶಿ ಪ್ರೇಮ ಕಥೆ

ಇದು ಎಲ್ಲರ ಗೆಲುವು