The Go-Giver ಪುಸ್ತಕ ತಾತ್ಪರ್ಯ
The Go-Giver ಪುಸ್ತಕದ ಕರ್ತೃಗಳಾದ ಬಾಬ್ ಬರ್ಗ್ ಹಾಗೂ ಜಾನ್ ಡೇವಿಡ್ ಮನ್ ನೀತಿ ಕಥೆಯ ರೂಪದಲ್ಲಿ ಗೆಲುವಿನ ರಹಸ್ಯವನ್ನು ಹೇಳುತ್ತಾರೆ. ಈ ಕಥೆ go-getter ಮನೋಭಾವವನ್ನು ಹೊಂದಿದ್ದ ಜೋ ಎನ್ನುವ ಪಾತ್ರದ ಸುತ್ತ ಹಣೆದಿದೆ. ತನ್ನ ವೃತ್ತಿಯಲ್ಲಿ ಅತ್ಯುನ್ನತ ಸ್ಥಾನವನ್ನು ಹೊಂದುವುದರ ಮೂಲಕ ಸಾಕಷ್ಟು ಸಂಪತ್ತನ್ನು ಗಳಿಸುವ ಗುರಿಯನ್ನು ಹೊಂದಿದ್ದ ಜೋಗೆ ತನ್ನ ಒಬ್ಬ ಕ್ಲೈಂಟ್ ತಪ್ಪಿ ಹೋಗಿದ್ದಕ್ಕೆ ಬಹಳ ನಿರಾಸೆ ಆಗುತ್ತದೆ. ಆಗ ಯಶಸ್ಸಿನ ಪಾಠವನ್ನು ಹೇಳಿಕೊಡುವ ಯಶ್ಸಸ್ವಿ ಉದ್ಯಮಿ ಪಿಂದರ್ ನನ್ನು ತನ್ನ ಹಿರಿಯ ಸಹುದ್ಯೋಗಿಯ ಮುಖಾಂತರ ಭೇಟಿ ಆಗುತ್ತಾನೆ. ಈಗಾಗಲೇ ಸಾಕಷ್ಟು ಹಣವನ್ನು ಸಂಪಾದಿಸಿದ ಪಿಂದರ್ ನನ್ನು ಭೇಟಿ ಆಗುವುದು ಅಷ್ಟು ಸುಲಭವಲ್ಲ ಎಂದು ಭಾವಿಸಿದ ಜೋಗೆ ಆತ ಅಷ್ಟು ಸುಲಭವಾಗಿ ಮಾತುಕತೆಗೆ ಸಿಕ್ಕಿದ್ದನ್ನು ಕಂಡು ಆಶ್ಚರ್ಯವಾಗುತ್ತದೆ. ತಾನು ಹೇಳಿ ಕೊಡುವ ಒಂದೊಂದೇ ಪಾಠವನ್ನು ನೀನು ಅದೇ ದಿನ ಅಳವಡಿಸಿಕೊಳ್ಳುತ್ತಾ ಹೋಗಬೇಕು ಎನ್ನುವ ಷರತ್ತಿನೊಂದಿಗೆ ಪಿಂದರ್ ಆತನಿಗೆ ಯಶಸ್ವಿ ಸೂತ್ರಗಳನ್ನು ಹೇಳಿ ಕೊಡಲು ಪ್ರತಿ ದಿನ ಒಬ್ಬ ಅತಿಥಿಯನ್ನು ಭೇಟಿ ಮಾಡಿಸುತ್ತಾನೆ.
ಈ ಕಥೆಯಲ್ಲಿ ಪಿಂದರ್ ಐದು ಸೂತ್ರಗಳನ್ನು ಅತಿಥಿಗಳಿಂದ ಹೇಳಿಸಿದ್ದಾನೆ.
ಮೊದಲನೇ ಸೂತ್ರ: The Law of Value
Your true worth is determined by how much more you give in value than you take in payment.
ನೀವು ಯಾವುದೇ ವ್ಯವಹಾರ ಅಥವಾ ಉದ್ಯೋಗದಲ್ಲಿರಬಹುದು. ನಿಮಗೆ ಸಿಗುವ ಹಣಕ್ಕಿಂತ ಹೆಚ್ಚಿನ ಮೌಲ್ಯವನ್ನು ನೀವು ಉತ್ಪನ್ನ ಅಥವಾ ಸೇವೆಯ ರೂಪದಲ್ಲಿ ನೀಡಬೇಕು. ಇಂಗ್ಲೀಷ್ ನಲ್ಲಿ Value for Money ಅನ್ನುವ ಮಾತಿದೆ. ಅಂದರೆ ಒಂದು ಉತ್ಪನ್ನ ಅಥವಾ ಸೇವೆ, ಅದು ಬಯಸುವ ಹಣಕ್ಕೆ ತಕ್ಕುದಾಗಿದ್ದರೆ ಅದಕ್ಕೆ value for money ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ಕೇವಲ ಅಷ್ಟಕ್ಕೆ ಸೀಮಿತವವಾಗದೆ ಕೊಟ್ಟ ಹಣಕ್ಕಿಂತ ಹೆಚ್ಚಿನ ಮೌಲ್ಯವನ್ನು ಗ್ರಾಹಕರಿಗೆ ನೀಡಿದರೆ ಮಾತ್ರ ಅವರು ನಿಮ್ಮ ಬಳಿ ಮತ್ತೆ ಬರುತ್ತಾರೆ. ಉಳಿದವರು ಕೊಟ್ಟ ಹಣಕ್ಕೆ ತಕ್ಕಷ್ಟು ಸೇವೆ ಒದಿಗಿಸಿದ್ದರೆ ನೀವು ಅದಕ್ಕಿಂತ ಹೆಚ್ಚಿನ ಸೇವೆ ಒದಗಿಸಿರುತ್ತಿರಿ. ಆಗ ಜನ ನಿಮ್ಮ ಸೇವೆಯನ್ನೇ ಇನ್ನಷ್ಟು ಬಯಸುತ್ತಾರೆ.
ಎರಡನೇ ಸೂತ್ರ: The Law of Compensation
Your income is determined by how many people you serve them and how well you serve them.
ಒಬ್ಬ ನಟ ನಾಟಕದಲ್ಲಿ ಪಾತ್ರ ನಿರ್ವಹಿಸಿದರೆ ಆತನಿಗೆ ದೊರೆಯುವ ಸಂಭಾವನೆಯಲ್ಲಿ ಒಂದು ಮಿತಿ ಇರುತ್ತದೆ. ಅದೇ ನಟ ಒಂದು ಸಿನೆಮಾದಲ್ಲಿ ನಟಿಸಿದರೆ ಆತನ ಸಂಭಾವನೆ ಹೆಚ್ಚಾಗಿರುತ್ತದೆ. ಸಾಧಾರಣವಾಗಿ ಒಂದು ನಾಟಕ ಪ್ರದರ್ಶನ ಹೆಚ್ಚೆಂದರೆ ಇನ್ನೂರರಿಂದ ಮುನ್ನೂರು ಜನರನ್ನು ತಲುಪಬಹುದು. ಆ ನಾಟಕ ನೂರು ಪ್ರದರ್ಶನ ಆದರೂ ಪ್ರೇಕ್ಷಕರ ಸಂಖ್ಯೆ ಇಪ್ಪತ್ತು ಸಾವಿರ ದಾಟಲಾರದು. ಅದೇ ಒಂದು ಸಾಧಾರಣ ಯಶಸ್ವಿ ಸಿನೆಮಾ ಲಕ್ಷಾಂತರ ಪ್ರೇಕ್ಷಕರನ್ನು ತಲುಪುತ್ತದೆ. ಹಾಗಾಗಿ ಅದಕ್ಕೆ ಶ್ರಮಿಸಿದವರ ಸಂಭಾವನೆಯೂ ಅವರ ಯೋಗ್ಯತೆಗೆ ತಕ್ಕಂತೆ ಹೆಚ್ಚಾಗಿರುತ್ತದೆ.
ಈ ಸೂತ್ರವನ್ನು ಎಲ್ಲಾ ಕ್ಷೇತ್ರಗಳಲ್ಲೂ ಅಳವಡಿಸಬಹುದು. ಆಫ್ಲೈನ್ ನಲ್ಲಿ ಒಮ್ಮೆ ನೂರು ಜನರ ಜೊತೆ ನೇರ ಸಂಪರ್ಕ ಸಾಧ್ಯವಾದರೆ, ಆನ್ಲೈನ್ ನಲ್ಲಿ ಸಾವಿರ ಜನರನ್ನು ತಲುಪಬಹುದು. ನಿಮ್ಮ ಅತ್ಯುತ್ತಮವಾದ ಸೇವೆಯನ್ನು ಹೆಚ್ಚು ಜನ ಬಳಸಿದ್ದಷ್ಟು ನಿಮ್ಮ ಲಾಭವೂ ಕೂಡ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ನಿಮ್ಮ ಉತ್ಪನ್ನಗಳು ಅಥವಾ ಸೇವೆ ಆದಷ್ಟು ಹೆಚ್ಚು ಜನರಿಗೆ ತಲುಪುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.
ಸೂತ್ರ ಮೂರು: The Law of Influence
Your influence is determined by how abundantly you place other people's interests first.
ಪ್ರಭಾವಿ ವ್ಯಕ್ತಿ ಅಂತ ಅನ್ನಿಸಿಕೊಳ್ಳಲು ಇರುವ ಸುಲಭ ಸೂತ್ರ ಇದು. ನಿಮ್ಮ ನಿಜವಾದ ನೆಟ್ವರ್ಕ್, ನಿಮಗೆ ಎಷ್ಟು ವ್ಯಕ್ತಿಗಳು ಗೊತ್ತಿದ್ದಾರೆ ಅನ್ನುವುದರ ಮೇಲೆ ಆಧಾರಿತವಾಗಿಲ್ಲ. ಬದಲಾಗಿ ಎಷ್ಟು ಜನರು ನಿಮಗೋಸ್ಕರ ಕೆಲಸ ಮಾಡಲು ಸಿದ್ಧರಿದ್ದಾರೆ ಅನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಜನ ನಿಮ್ಮ ಸೇವೆಯನ್ನು ಬಯಸಬೇಕಾದರೆ ನಿಮ್ಮನ್ನು ಇಷ್ಟಪಡಬೇಕು. ಅವರು ನಿಮ್ಮನ್ನು ಇಷ್ಟಪಡಬೇಕಾದರೆ ನೀವು ಅವರ ಆಸಕ್ತಿಗಳ ಕಡೆಗೆ ಗಮನಹರಿಸಬೇಕು.
ಪ್ರತಿ ಯಶ್ಸಸ್ವಿ ವ್ಯಕ್ತಿಗಳ ಯಶಸ್ಸಿನ ಗುಟ್ಟು ಕೂಡ ಇದೇ. ಪ್ರತಿಯೊಬ್ಬರೂ ತಮ್ಮ ಬಗ್ಗೆ ಹೇಳಿಕೊಳ್ಳಲು ಹಾತೊರೆಯಬೇಕಾದರೆ, ಯಾರು ಅವರ ಮಾತುಗಳನ್ನು ಆಸಕ್ತಿಯಿಂದ ಕೇಳಲು ಬಯಸುತ್ತಾರೋ ಅಂಥವರನ್ನು ಜನ ಇಷ್ಟ ಪಡುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಸ್ವಹಿತಾಸಕ್ತಿಯನ್ನು ಬದಿಗಿರಿಸಿ ಇತರರ ಅಗತ್ಯತೆಗಳನ್ನು ಯಾರು ಈಡೇರಿಸಲು ಲಭ್ಯರಿರುತ್ತಾರೋ ಅಂಥವರು ಜನರ ಪ್ರೀತಿಗೆ ಪಾತ್ರರಾಗುತ್ತಾರೆ.
ಯಾವ ಫಲಾಪೇಕ್ಷೆಯೂ ಇಲ್ಲದೆ ಇತರರಿಗೆ ನೆರವಾಗಬೇಕು ಎಂದು ಈ ಸೂತ್ರ ಹೇಳುತ್ತದೆ. ಹಾಗಾದರೆ ಯಾವ ನಿರೀಕ್ಷೆಯೂ ಇಲ್ಲದೆ ಇತರರಿಗೆ ನೆರವಾಗುವುದು ಹೇಗೆ? ಜನರು ನಮ್ಮ ನೆರವಿನ ಲಾಭವನ್ನು ಪಡೆದುಕೊಳ್ಳುತ್ತಾರೆ. ಮುಂದೆ ನಮಗೆ ಅಗತ್ಯವಿದ್ದಾಗ ಯಾರೂ ನಮ್ಮ ನೆರವಾಗಿ ಬರುವುದಿಲ್ಲ ಎನ್ನುವ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಒಂದು ಸಿನಿಮಾವನ್ನು ವೀಕ್ಷಿಸುವಾಗ ನಿಮಗೆ ಅಲ್ಲಿ ಬರುವ ಪಾತ್ರಗಳು ಕಾಲ್ಪನಿಕ ಎಂದು ತಿಳಿದಿದ್ದರೂ ಪಾತ್ರಗಳು ನಕ್ಕಾಗ ನೀವು ನಗುತ್ತೀರಿ. ಅವರು ಅತ್ತಾಗ ನೀವು ಕೂಡ ಭಾವೋವೇಶಕ್ಕೆ ಒಳಗಾಗುತ್ತೀರಿ. ಅಂದರೆ ಅವರ ಭಾವನೆ ಕೇವಲ ನಟನೆ ಎಂದು ನಿಮಗೆ ಗೊತ್ತಿದ್ದರೂ ಪಾತ್ರಗಳ ಭಾವನೆಗಳ ಬಗ್ಗೆ ಅಪನಂಬಿಕೆಯನ್ನು ನೀವು ತಾತ್ಕಾಲಿಕವಾಗಿ ಬದಿಗಿರಿಸಿ ಆ ಭಾವನೆಗಳನ್ನು ಅನುಭವಿಸುತ್ತೀರಿ. ಇದೇ ರೀತಿ ನಮ್ಮಿಂದ ಇತರರಿಗೆ ಒಳಿತಾದರೆ ನಮಗೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ತಿಳಿದಿದ್ದರೂ ಆ ನಿರೀಕ್ಷೆಯನ್ನು ಇತರರಿಗೆ ನೆರವಾಗುವ ಸಂದರ್ಭದಲ್ಲಿ ಬದಿಗಿರಿಸಬೇಕು.
ಇಲ್ಲಿ ನಾವು ನೆನಪಿಟ್ಟುಕೊಳ್ಳಬೇಕಾಗಿರುವುದು ಪ್ರಕೃತಿಯ ನಿಯಮವನ್ನು. ನಾವು ಏನನ್ನೇ ಕೊಟ್ಟರೂ ಅದರ ಪ್ರತಿಫಲ ನಮಗೆ ಸಿಗುತ್ತದೆ. ಅದು ಭೌತಿಕ ಮಟ್ಟದಲ್ಲಿರಬಹುದು (Physical level) ಅಥವಾ ಆಲೋಚನಾ ಮಟ್ಟದಲ್ಲೂ (Thought level) ಇರಬಹುದು. ಯಾರೂ ನಮ್ಮ ನೆರವಿಗೆ ಬರುವುದಿಲ್ಲ ಎಂಬುದನ್ನು ಗಾಢವಾಗಿ ಆಲೋಚಿಸಿದರೆ ಆ ಆಲೋಚನೆಯೇ ನಿಜವಾಗಬಹುದು. ಹಾಗಾಗಿ ನಮ್ಮ ಆಲೋಚನೆಗಳೂ ಸರಿಯಾದ ದಾರಿಯಲ್ಲಿ ನಡೆದರೆ ಮಾತ್ರ ನಾವು ಪ್ರತಿಫಲ ಬಯಸದೆಯೂ ನಮಗೆ ಯಶಸ್ಸು ದಕ್ಕುತ್ತದೆ.
ಸೂತ್ರ ನಾಲ್ಕು: The Law of Authenticity
The most valuable gift you have to offer is yourself.
ಕ್ರಿಕೆಟ್ ಜಗತ್ತಿನಲ್ಲಿ ರಾಹುಲ್ ದ್ರಾವಿಡ್ ಹಾಗೂ ಸೆಹ್ವಾಗ್ ವಿರುದ್ಧ ದಿಕ್ಕಿಗೆ ಸೇರಿದವರು. ಬರುವ ಪ್ರತಿ ಚೆಂಡನ್ನು ಬೌಂಡರಿಗೆ ಎಸೆಯಬೇಕೆಂದು ಸೆಹ್ವಾಗ್ ಬಯಸುತ್ತಾನೆ. ತನ್ನ ದಿಕ್ಕಿನಲ್ಲಿ ಬರುವ ಚೆಂಡನ್ನು ತಡೆದು ಔಟಾಗದಂತೆ ನೋಡಿಕೊಳ್ಳುವುದರ ಮೂಲಕ ಕ್ರಿಕೆಟ್ ಜಗತ್ತಿನ ಗೋಡೆ ಎಂದೇ ದ್ರಾವಿಡ್ ಕರೆಸಿಕೊಳ್ಳುತ್ತಾನೆ. ಇಲ್ಲಿ ಇಬ್ಬರ ವ್ಯಕ್ತಿತ್ವವೂ ಭಿನ್ನ. ದ್ರಾವಿಡ್ ಸೆಹ್ವಾಗ್ ಆಗಲು ಬಯಸಿದರೆ ಅಥವಾ ಸೆಹ್ವಾಗ್ ದ್ರಾವಿಡ್ ಆಗಲು ಬಯಸಿದರೆ ಇಬ್ಬರೂ ಇನ್ನೊಬ್ಬರ ಪಾತ್ರವನ್ನು ನಿರ್ವಹಿಸಲು ಸೋಲುತ್ತಾರೆ.
ಅದೇ ರೀತಿ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಇವರಿಬ್ಬರ ವ್ಯಕ್ತಿತ್ವಗಳೂ ಭಿನ್ನ. ಯಾವುದೇ ವ್ಯವಹಾರ ಮಾಡುವುದಿದ್ದರೂ ನಿಮ್ಮತನವನ್ನು ಬಿಟ್ಟುಕೊಡಬಾರದು. ಒಬ್ಬ ವ್ಯಕ್ತಿಯಿಂದ ಸ್ಪೂರ್ತಿಯನ್ನು ಪಡೆದು ಆ ವ್ಯಕ್ತಿಯನ್ನು ಅನುಸರಿಸಬಹುದು. ಆದರೆ ಅನುಕರಣೆ ಮಾಡಬಾರದು. ಭಗವದ್ಗೀತೆಯಿಂದ ಪ್ರೇರಣೆ ಪಡೆದು ಒಬ್ಬ ವ್ಯಕ್ತಿ ಸಂನ್ಯಾಸಿ ಆಗಿ ಭಗವದ್ಗೀತೆಯ ಸಂದೇಶವನ್ನು ಸಾರಬಹುದು. ಅದೇ ಭಗವದ್ಗೀತೆಯಿಂದ ಪ್ರೇರಣೆಯನ್ನು ಪಡೆದು ಇನ್ನೋರ್ವ ವ್ಯಕ್ತಿ ಒಂದು ದೊಡ್ಡ ಕಂಪೆನಿಯನ್ನು ಸ್ಥಾಪಿಸಬಹುದು. ಇವರಿಬ್ಬರೂ ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ಒಳಿತನ್ನುಂಟುಮಾಡುತ್ತಿದ್ದಾರೆ. ಆದರೆ ತಮ್ಮದೇ ಆದ ರೀತಿಯಲ್ಲಿ ಮಾಡುತ್ತಿದ್ದಾರೆ.
ನೀವು ನೀವಾಗಿರುವುದೇ ನೀವು ಇತರರಿಗೆ ಕೊಡಬಹುದಾದ ಅತಿ ದೊಡ್ಡ ಉಡುಗೊರೆ. ಯಾವುದೇ ರೀತಿಯ ವೇಷ ಕಟ್ಟಿಕೊಂಡು ಜನರನ್ನು ಮರಳು ಮಾಡಲು ಯತ್ನಿಸುವುದು ಯಶಸ್ಸಿನ ಗುಣಲಕ್ಷಣವಲ್ಲ. ನಿಮ್ಮ ಪ್ರಾಮಾಣಿಕತೆಯೇ ನಿಮ್ಮ ಗೆಲುವು.
ಐದನೇ ಸೂತ್ರ: The Law of Receptivity
The key to effective giving is to stay open to receiving.
ಕೊಡುವುದು ಮತ್ತು ಪಡೆದುಕೊಳ್ಳುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನೀವು ಹೆಚ್ಚು ಸ್ವೀಕರಿಸಿದರೆ ಮಾತ್ರ ನಿಮಗೆ ನೀಡಲು ಸಾಧ್ಯವಾಗುತ್ತದೆ. ನಾನು ಕೇವಲ ಕೊಡುವವನಾಗುತ್ತೇನೆ. ಯಾರಿಂದ ಏನನ್ನೂ ಪಡೆಯುವುದಿಲ್ಲ ಎನ್ನುವ ಮನೋಭಾವ ಬೇಡ. ಉಸಿರಾಟದ ಪ್ರಕ್ರಿಯೆಯಲ್ಲಿ ಉಸಿರನ್ನು ಹೊರಗೆಳದಷ್ಟೇ ಮುಖ್ಯವಾಗಿ ಉಸಿರನ್ನು ಒಳಗೆಳೆದುಕೊಳ್ಳಬೇಕು. ಇಲ್ಲದಿದ್ದರೆ ಉಸಿರಾಟ ನಿಂತು ಹೋಗುತ್ತದೆ. ಅದೇ ರೀತಿ ಕೊಡು, ಕೊಳ್ಳುವಿಕೆ ಒಂದು ನಿರಂತರ ಪ್ರಕ್ರಿಯೆ. ನಾನು ಪಡೆಯಲು ಆರ್ಹನಲ್ಲ ಅನ್ನುವ ಕೀಳರಿಮೆಯೂ ಬೇಡ, ಬೇರೆಯವರಿಂದ ಯಾವ ನೆರವು ಕೂಡ ಬೇಕಾಗಿಲ್ಲ ಅನ್ನುವ ಅತಿಯಾದ ಆತ್ಮವಿಶ್ವಾಸವೂ ಬೇಡ. ಸ್ವೀಕೃತ ಮನೋಭಾವ ಇದ್ದಲ್ಲಿ ಮಾತ್ರ ಮತ್ತಷ್ಟೂ ನೀಡಲು ಸಾಧ್ಯವಾಗುತ್ತದೆ. ಅದು ಯಾವುದೇ ರೂಪದಲ್ಲಿ ಇರಬಹುದು. ಒಂದು ವೇಳೆ ಯಾರಾದರೂ ನಿಮಗೆ ಯಾವುದಾದರೂ ವಿಚಾರದಲ್ಲಿ ಮೆಚ್ಚುಗೆ ಸೂಚಿಸಿದರೆ ಅದನ್ನು ನಿರಾಕರಿಸದೆ ಮುಗುಳ್ನಗೆಯ ಮೂಲಕ ಧನ್ಯವಾದ ಸಮರ್ಪಿಸಿ. ಇದರಿಂದ ನಿಮ್ಮ ಸ್ವೀಕೃತ ಮನೋಭಾವ ಇನ್ನಷ್ಟು ಜಾಗೃತವಾಗಿ ಮುಂದೆ ಮತ್ತಷ್ಟು ಪಡೆಯಲಾರಂಭಿಸುತ್ತೀರಿ.
ಇದು ಕೇವಲ ಕಾಲ್ಪನಿಕ ಕಥೆಯಾಗಿದ್ದರೂ ಈ ಕಥೆಯಲ್ಲಿ ಬರುವ ಸೂತ್ರಗಳನ್ನು ನಿಜ ಜೀವನದಲ್ಲಿ ಅನೇಕರು ಬಳಸಿ ತಮ್ಮ ವೈಯಕ್ತಿಕ ಜೀವನದಲ್ಲಿ ಹಾಗೂ ವ್ಯವಹಾರಗಳಲ್ಲಿ ಯಶಸ್ವಿಯಾಗಿದ್ದಾರೆ. ಈ ಕಥೆಯಲ್ಲಿ ಬರುವ ಪಾತ್ರಗಳು ಕಾಲ್ಪನಿಕ. ಆದರೆ ಇದನ್ನು ಬರೆದ ಲೇಖಕರು ಆ ರೀತಿಯ ವ್ಯಕ್ತಿತ್ವದವರನ್ನು ನಿಜ ಜೀವನದಲ್ಲಿ ಭೇಟಿಯಾಗಿದ್ದಾರೆ. ಹಾಗೆಯೇ ಸ್ವತಃ ತಮ್ಮ ಜೀವನದಲ್ಲಿ ಈ ಅಂಶಗಳನ್ನು ಅಳವಡಿಸಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಇದನ್ನು ಕಟ್ಟುಕತೆ ಎಂದು ಭಾವಿಸದೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿ.

Comments
Post a Comment