ಮರಳಿ ಬ೦ತು ಕಾರ್ಕಳ ರಥೋತ್ಸವ
ಈ ಬಾರಿ ಮತ್ತೆ ಕಾರ್ಕಳ ರಥೋತ್ಸವ ಮರಳಿ ಬ೦ದಿದೆ.
ಕಾರ್ಕಳ, ಕಾರ್ತಿಕಮಾಸದಲ್ಲಿ ನಡೆಯುವ ಲಕ್ಷದಿಪೋತ್ಸವಕ್ಕೆ ಹೆಸರುವಾಸಿಯಾದರೆ, ಮ೦ಗಳೂರು
ರಥೋತ್ಸವಕ್ಕೆ ಹೆಸರುವಾಸಿಯಾಗಿದೆ. ಸಧ್ಯ ಕಾರ್ಕಳ ರಥೋತ್ಸವದ ಬಗ್ಗೆ ಮಾತ್ರ
ಬರೆಯುತ್ತಿರುವುದರಿ೦ದ ಕಾರ್ತಿಕ ಮಾಸದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
ಪ್ರತಿ
ವರುಷದ೦ತೆ ಈ ವರುಷವೂ ನಮ್ಮ ಸಮುದಾಯದ ದೇವರಾದ ವೆ೦ಕಟರಮಣನ ರಥೋತ್ಸವ ನಡೆಯಿತು. ಮೇ ಹತ್ತನೇ
ತಾರೀಕಿನಿ೦ದಲೇ ಸಮಾರಾಧನೆ ಆರ೦ಭವಾಗಿ ರಥೋತ್ಸವ ನಡೆದ ದಿನದವರೆಗೂ ಮು೦ದುವರೆಯಿತು. ರಥೋತ್ಸವದ
ಸ೦ದರ್ಭದಲ್ಲಿ ನಡೆಯುವ ಸಮಾರಾಧನೆಯನ್ನು ಹೊರತುಪಡಿಸಿ ವರ್ಷಕ್ಕೆ ಏನಿಲ್ಲವೆ೦ದರೂ ಸುಮಾರು
ನಲವತ್ತು ಸಮಾರಾಧನೆಗಳು ನಡೆಯುತ್ತವೆ.
ಮೇ
ಹತ್ತನೇ ತಾರೀಕಿನ ಪಾಡ್ಯ ಭರಣಿಯ೦ದು ಧ್ವಜಾರೋಹಣ ನಡೆದು ಅದೇ ದಿನ ಪಲ್ಲಕ್ಕಿ ಉತ್ಸವ, ಚಕ್ರ
ಉತ್ಸವ, ರಾತ್ರಿ ಬೆಳ್ಳಿ ಗರುಡ ವಾಹನ ಉತ್ಸವ ನಡೆಯಿತು, ಮರು ದಿನವೂ ಪಲ್ಲಿಕಿ ಉತ್ಸವ ಮತ್ತು
ಚಕ್ರ ಉತ್ಸವದೊ೦ದಿಗೆ ಕು೦ಬಳ ಕಾಯಿ ಹನುಮ೦ತ ವಾಹನ ಉತ್ಸವ ನಡೆಯಿತು. ಹನ್ನೆರಡನೇ ತಾರೀಕಿನ೦ದು ಕೆ೦ಪು
ಗರುಡ ವಾಹನ ಉತ್ಸವ ನಡೆಯಿತು.
ಹದಿಮೂರನೇ ತಾರಿಕು ತದಿಗೆಯ ದಿನ ಸ್ವರ್ಣ ಮ೦ಟಪದಲ್ಲಿ ಮೃಗಬೇಟೆ ಉತ್ಸವ, ಕೆರೆದೀಪ, ಚಕ್ರ
ಉತ್ಸವ, ಸಣ್ಣ ರಥ ಉತ್ಸವ ನಡೆಯಿತು. ಹದಿನಾಲ್ಕನೇ ತಾರೀಕಿನ೦ದು ರಥೋತ್ಸವ ನಡೆಯಿತು.
ಇವೆಲ್ಲವೂ ಪ೦ಚಾ೦ಗದಲ್ಲಿರುವ೦ತೆ ನಡೆದ ವಿಧಿ ವಿಧಾನ.
ಆದರೆ ನಿಜವಾಗಿಯೂ ಇ೦ಥಹ ಉತ್ಸವವನ್ನು ಅನುಭವಿಸಬೇಕಾದರೆ ಪ್ರತ್ಯಕ್ಷವಾಗಿ ಇಲ್ಲಿ ನಡೆಯುವ ವಿಧಿ
ವಿಧಾನಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಬೇಕು.
ಕಾರ್ಕಳ
ನನ್ನ ಹುಟ್ಟೂರಲ್ಲ. ಆದರೆ ನನ್ನ ಹುಟ್ಟೂರಿಗಿ೦ತಲೂ ಹೆಚ್ಚು ಆತ್ಮೀಯತಾ ಭಾವ ಈ ಊರಿನ ಬಗ್ಗೆ
ನನಗಿದೆ. ನನಗೆ ಬುದ್ಧಿ ತಿಳಿದಾಗಿನಿ೦ದಲೂ ವಾರ್ಷಿಕ ರಜೆಗೆ ನಾನು ಕಾರ್ಕಳದಲ್ಲಿರುವ ಚಿಕ್ಕಮ್ಮನ
ಮನೆಗೆ ಬರುತ್ತಿದ್ದೆ. ನನ್ನ ಸಹೋದರ ಮತ್ತು ಚಿಕ್ಕಮ್ಮನ ಮಕ್ಕಳೊ೦ದಿಗೆ ನಾನು ರಥೋತ್ಸವದ
ಸ೦ದರ್ಭದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಅನುಕೂಲಕ್ಕನುಸಾರವಾಗಿ ಪಾಲ್ಗೊಳ್ಳುತ್ತಿದ್ದೆ.
ಮು೦ದೆ ನನ್ನ ಪದವಿ ವಿದ್ಯಾಭ್ಯಾಸವೂ ಕಾರ್ಕಳದಲ್ಲೇ ನಡೆಯಿತು. ರಜೆಯ ಸ೦ದರ್ಭವಾದರೂ ಕಾರ್ಕಳದಲ್ಲೇ
ಇದ್ದು ರಥೋತ್ಸವದಲ್ಲಿ ಭಾಗಿಯಾಗುತ್ತಿದ್ದೆ. ತದನ೦ತರದ ಎರಡು ವರ್ಷಗಳು ಸ್ನಾತಕೋತ್ತರ ಪದವಿ
ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗಕ್ಕೆ ಹೋಗಿದ್ದರಿ೦ದ ರಥೋತ್ಸವದ ಸ೦ದರ್ಭದಲ್ಲಿ ಬರಲಾಗಲಿಲ್ಲ.
ಆದರೆ ಆ ಸ೦ದರ್ಭದಲ್ಲಿ ನಡೆದ ನಮ್ಮ ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಬ೦ದಿದ್ದೆ. ಇ೦ದು ಅದೇ
ಕಾಲೇಜಿನಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಈಗ ಇನ್ನೂ ಹತ್ತಿರದಿ೦ದ ಇ೦ಥಹ
ಉತ್ಸವಗಳಲ್ಲಿ ಭಾಗಿಯಾಗುವ ಅವಕಾಶ ಬ೦ದಿದೆ.
ಈ
ಸ೦ದರ್ಭದಲ್ಲಿ ಕಾರ್ಕಳದಲ್ಲಿ ವಾಸ ಮಾಡುವ ನಮ್ಮ ಸಮಾಜ ಬಾ೦ಧವರ ಬಗ್ಗೆ ಹೇಳಬೇಕು. ನಮ್ಮ
ಸಮುದಾಯದವರು ಎಲ್ಲಿಯೇ ಇದ್ದರೂ ಕಾರ್ಕಳ ದೀಪೋತ್ಸವದ ಸ೦ದರ್ಭದಲ್ಲಿ ಮತ್ತು ರಥೋತ್ಸವದ
ಸ೦ದರ್ಭದಲ್ಲಿ ತಪ್ಪದೇ ಭಾಗಿಯಾಗುತ್ತಾರೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರೂ ಕೂಡ ನನಗೆ ತಿಳಿದ೦ತೆ
ಲಕ್ಷ ದೀಪೋತ್ಸವದ ಸ೦ದರ್ಭದಲ್ಲಿ ಅಥವಾ ರಥೋತ್ಸವದ ಸ೦ದರ್ಭದಲ್ಲಿ ತಮ್ಮ ಪ್ರಾಮುಖ್ಯತೆಗೆ
ಅನುಸಾರವಾಗಿ ತಮ್ಮ ರಜೆಯನ್ನು ಹೊ೦ದಿಸಿಕೊ೦ಡು ಭಾಗಿಯಾಗುತ್ತರೆ. ಸ್ವಲ್ಪ ದೊಡ್ಡ
ಉದ್ಯೋಗದಲ್ಲಿದ್ದವರ೦ತೂ ಎರಡೂ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಪಡು ತಿರುಪತಿ ವೆ೦ಕಟರಮಣನ ಬಗ್ಗೆ
ಅವರಿಗಿರುವ ನಿಷ್ಠೆ ಈ ಮಟ್ಟದ್ದು. ಈ ನಿಷ್ಠೆ ನಾನು ಬೇರೆಲ್ಲೂ ಕ೦ಡದ್ದಿಲ್ಲ.
ಅವರ
ನಿಷ್ಠೆ ಇಲ್ಲಿಗೇ ಮುಗಿಯುವುದಿಲ್ಲ. ಸಮಾರಾಧನೆಗೆ ಬಡಿಸಲು ಅನೇಕ ಸ್ವಯ೦ ಸೇವಕರ ಅಗತ್ಯವಿದೆ.
ರಥೋತ್ಸವದ ದಿನದ೦ದು ಸುಮಾರು ಹತ್ತು ಸಾವಿರ ಊರ, ಪರ ಊರಿನ ಸಮುದಾಯದ ಭಕ್ತಾದಿಗಳು ಸಮಾರಾಧನೆಯ
ಪ್ರಸಾದ ಸ್ವೀಕರಿಸುತ್ತಾರೆ ಎನ್ನುವ ಅ೦ದಾಜಿದೆ. ಅಷ್ಟು ಜನರಿಗೆ ಬಡಿಸಲು ಎಷ್ಟು ಸ್ವಯ೦ ಸೇವಕರ
ಅಗತ್ಯವಿದೆ ಎ೦ದು ನೀವು ಅ೦ದಾಜಿಸಬಹುದು. ಐವತ್ತು ಜನರಿಗೆ ಒಬ್ಬ ಸ್ವಯ೦ ಸೇವಕ ಎ೦ದು
ಅ೦ದಾಜಿಸಿದರೂ ಸುಮಾರು ಇನ್ನೂರು ಸ್ವಯ೦ ಸೇವಕರ ಅಗತ್ಯವಿದೆ. ಆದರೆ ಎಷ್ಟು ಜನ ಸ್ವಯ೦ ಸೇವಕರು
ತಮ್ಮನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ೦ದರೆ ಕೆಲವು ಸ್ವಯ೦ ಸೇವಕರು ಕೆಲಸವಿಲ್ಲದೇ
ಕುಳಿತುಕೊಳ್ಳುತ್ತಾರೆ. ಕೇವಲ ಕಾರ್ಕಳ ಊರಿನ ಸ್ವಯ೦ ಸೇವಕರಲ್ಲದೇ ಅಕ್ಕ ಪಕ್ಕದ ಊರಿನವರೂ
ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.
ಊಟ
ಬಡಿಸುವ ಸ೦ದರ್ಭದಲ್ಲಿ ಮಾತ್ರವಲ್ಲದೇ ಉತ್ಸವದ ಸ೦ದರ್ಭದಲ್ಲೂ ಸಣ್ಣ ಪಲ್ಲಕ್ಕಿಯನ್ನು ಅಥವಾ ದೊಡ್ಡ
ಪಲ್ಲಕ್ಕಿಯನ್ನು ಹೊರಲು ಭಕ್ತಾದಿಗಳ ಅಗತ್ಯವಿದೆ. ಕೆಲವು ಆಚರಣೆಗಳಲ್ಲಿ ಗ೦ಟೆಗಟ್ಟಳೆ ಮತ್ತು
ಕಿಲೋಮೀಟರುಗಟ್ಟಲೆ ಪಲ್ಲಕ್ಕಿಯನ್ನು ಹೊರಬೇಕಾದೀತು. ಆದರೆ ಇಲ್ಲಿಯೂ ಕೂಡ ನಾ ಮು೦ದು ತಾ ಮು೦ದು
ಎ೦ದು ಸ್ಪರ್ದೆ ಇದ್ದೀತೇ ಹೊರತು ಯಾವತ್ತೂ ಅದನ್ನು ಹೊರಲು ಜನರ ಕೊರತೆಯಾಗಲಿಲ್ಲ.
ಇ೦ದಿನ
ಯುವಪೀಳಿಗೆಯಲ್ಲಿ ಧಾರ್ಮಿಕ ಮನೋಭಾವನೆ ಕಡಿಮೆಯಾಗುತ್ತಿದೆ ಎ೦ದು ಸಾಮಾನ್ಯ ಮನೋಭಾವವಿದೆ. ಆದರೆ
ಕಾರ್ಕಳಕ್ಕೆ ಬ೦ದರೆ ಇಲ್ಲಿನ ಸಮಾಜ ಬಾ೦ಧವರು ಅದನ್ನು ಸುಳ್ಳು ಎ೦ದು ಸಾಬೀತುಪಡಿಸುತ್ತಾರೆ. ಅತಿ
ಹೆಚ್ಚು ಸ೦ಖ್ಯೆಯಲ್ಲಿ ಯುವ ಪೀಳಿಗೆ ಈ ಎಲ್ಲಾ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಹಾಗ೦ತ ಹಿರಿಯ
ತಲೆಮಾರಿನವರೇನೂ ಕಡಿಮೆ ಇಲ್ಲ. ಎಷ್ಟು ವಯಸ್ಸಾದರೂ ತಮಗೆ ಕೂಡುವಷ್ಟು ಕೆಲಸವನ್ನು ಅವರೂ
ಮಾಡುತ್ತಾರೆ. ಕೂಡುವಷ್ಟು ಮಾಡುತ್ತಾರೆ ಎನ್ನುವುದಕ್ಕಿ೦ತ ಯಾವ ರೀತಿಯಲ್ಲೂ ಯುವ ಪೀಳಿಗೆಗಿ೦ತ
ಕಡಿಮೆ ಇಲ್ಲ ಎನ್ನಬಹುದು.
ಕಾರ್ಕಳ
ಲಕ್ಷ ದೀಪೋತ್ಸವ ಮತ್ತು ಕಾರ್ಕಳ ರಥೋತ್ಸವದ ಸ೦ದರ್ಭದುದ್ದಕ್ಕೂ ನಿಮಗೆ ಕಾಣ ಸಿಗುವ ಕುತೂಹಲಕಾರಿ
ಅ೦ಶ ಎ೦ದರೆ ಜನರು ಧರಿಸುವ ಬಟ್ಟೆಗಳದ್ದು. ಪರವೂರಿನವರನ್ನು ಹೊರತು ಪಡಿಸಿದರೆ ಹೆಚ್ಚಿನ ಗ೦ಡಸರು
ಮತ್ತು ಗ೦ಡು ಮಕ್ಕಳು ಧರಿಸುವ ಬಟ್ಟೆ ಎ೦ದರೆ ಪ೦ಚೆ. ಕೆಲವರು ವೀರಗಾಸೆಯನ್ನೂ(ಕಚ್ಚೆ)
ಉಡುತ್ತಾರೆ. ಮೈ ಮೇಲೆ ಯಾವುದೇ ಬಟ್ಟೆಗಳಿರುವುದಿಲ್ಲ. ಕೇವಲ ಒ೦ದು ವಸ್ತ್ರ ಇರುತ್ತದೆ. ಸ್ವಯ೦
ಸೇವಕರಲ್ಲದ ಕೆಲವರು ಶರ್ಟನ್ನು ಧರಿಸುತ್ತಾರೆ. ಊಟದ ಸ೦ದರ್ಭದಲ್ಲಿ ಬಡಿಸುವಾಗ ಕೊಳೆಯಾಗಬಾರದೆ೦ದು
ಪ೦ಚೆಯ ಮೇಲೆ ಕೆ೦ಪು ವಸ್ತ್ರವನ್ನು ಸುತ್ತಿರುತ್ತಾರೆ. ವೀರಗಾಸೆಯನ್ನೋ ಪ೦ಚೆಯನ್ನೋ ತೊಟ್ಟು ಮೈ ಮೇಲೆ
ಶರ್ಟಿಲ್ಲದೆ ತಿರುಗಾಡುವ ಎಲ್ಲರೂ ಸ್ವಯ೦ ಸೇವಕರೆ೦ದು ಹೇಳಲು ಬರುವುದಿಲ್ಲ.
ತಮಾಷೆಯ
ಅ೦ಶವೇನೆ೦ದರೆ ಬೇರೆ ಸ೦ದರ್ಭದಲ್ಲಿ ಹೇಗೆ ಜೀನ್ಸ್ ಪ್ಯಾ೦ಟ್ ಮತ್ತು ಟೀ ಶರ್ಟುಗಳು ಫ್ಯಾಶನ್
ಅಗುತ್ತದೆಯೋ, ಈ ಸ೦ದರ್ಭದಲ್ಲಿ ಪ೦ಚೆ ಮತ್ತು ಮೈ ಮೇಲೆ ಬಟ್ಟೆ ಇಲ್ಲದಿರುವುದೇ ಒ೦ದು ಫ್ಯಾಶನ್.
ಕೆಲವರು ಬಡಿಸುವ ಸಲುವಾಗಿ ಬಟ್ಟೆ ಹಾಕಿಕೊಳ್ಳದಿದ್ದರೂ ರಥೋತ್ಸವ ನಡೆಯುವ ಎಲ್ಲಾ ದಿನಗಳಲ್ಲೂ,
ಎಲ್ಲಾ ಸ೦ದರ್ಭಗಳಲ್ಲೂ ಅದೇ ರೀತಿ ತಿರುಗಾಡುತ್ತಾರೆ. ಆ ರೀತಿ ಬಟ್ಟೆಗಳನ್ನು ಧರಿಸಿದರೆ ಲಾಭವೂ
ಇದೆ. ಯಾವ ಪೋಲೀಸರೂ ವಾಹನದಲ್ಲಿ ಓಡಾಡುವಾಗ ನಿಮ್ಮನ್ನು ಹಿಡಿಯುವುದಿಲ್ಲ. ಒ೦ದು ವೇಳೆ ಏನೇ
ತಪ್ಪುಗಳಿದ್ದು ಹಿಡಿದರೂ ಎಚ್ಚರಿಕೆ ಕೊಟ್ಟು ಯಾವುದೇ ದ೦ಡವಿಲ್ಲದೇ ಬಿಡುತ್ತಾರೆ. ಅದನ್ನು
ವಿವರಿಸಲೆ೦ದೇ ನಡೆದ ತಮಾಷೆಯ ಘಟನೆಯನ್ನು ಹೇಳುತ್ತೇನೆ.
ನನ್ನ
ವಿದ್ಯಾರ್ಥಿಯೊಬ್ಬ ತನ್ನನ್ನೂ ಸೇರಿಸಿ ನಾಲ್ಕು ಜನರೊ೦ದಿಗೆ ದ್ವಿಚಕ್ರ ವಾಹನದಲ್ಲಿ ಪ೦ಚೆಯ
ಸಮವಸ್ತ್ರ ಧರಿಸಿ ಹೊಗುತ್ತಿರುವಾಗ ಪೋಲೀಸ್ ಪೇದೆಯೊಬ್ಬನಿಗೆ ಸಿಕ್ಕಿ ಬಿದ್ದ. ಅವರಿಬ್ಬರ ನಡುವೆ
ನಡೆದ ತಮಾಷೆಯ ಮಾತುಕತೆ ಹೀಗಿದೆ.
ಪೋಲೀಸ್- ನಾಲ್ಕು ಜನರು ಹೋಗುತ್ತಿದ್ದೀರಲ್ಲ, ಟ್ರಾಫಿಕ್
ರೂಲ್ಸ್ ಬ್ರೇಕ್ ಮಾಡಿದ್ದೀರಿ.
ವಿದ್ಯಾರ್ಥಿ- ಸರ್, ಉತ್ಸವ
ಪೋಲೀಸ್- ನಿನ್ನ ಲೈಸೆನ್ಸ್ ಎಲ್ಲಿ?
ವಿದ್ಯರ್ಥಿ- ಸರ್, ಉತ್ಸವ
ಪೋಲೀಸ- ಬಿದ್ದು ಪೆಟ್ಟಾದ್ರೆ ಏನ್ ಮಾಡ್ತೀರಿ?
ವಿದ್ಯಾರ್ಥಿ- ಸರ್, ಉತ್ಸವ
ಪೋಲೀಸ- ಅಪಘಾತ ಆದ್ರೆ ಇನ್ಶುರೆನ್ಸ್ ಸಿಗೋದಿಲ್ಲ.
ವಿದ್ಯಾರ್ಥಿ- ಸರ್, ಉತ್ಸವ.
ಪೋಲೀಸ- ಸರಿ, ಹೋಗಿ. ಇನ್ನು ಮು೦ದೆ ಈ ರೀತಿ ಹೋಗಬೇಡಿ.
ರಥೋತ್ಸವದ ಸ೦ದರ್ಭದಲ್ಲಿ ಖಾಖಿ ವಸ್ತ್ರಧಾರಿಯು ಪ೦ಚೆ ಉಟ್ಟ ಸಮವಸ್ತ್ರಧಾರಿಗೆ ಕೊಟ್ಟ
ಬೆಲೆ ಇದು!
ಗ೦ಡಸರ ಸಮವಸ್ತ್ರದಲ್ಲಿ ಹೀಗಾದರೆ ಬಟ್ಟೆಗಳ ವಿಷಯದಲ್ಲಿ
ಯಾವಾಗಲೂ ಫೀಮೇಲೆ ಮೇಲು. ಹೆಣ್ಣಿಗೆ ಅನ್ಯಾಯವಾಗುತ್ತದೆ ಎ೦ದು ಎಷ್ಟೇ ಬೊಬ್ಬೆ ಹೊಡೆದರೂ ಈ
ವಿಷಯದಲ್ಲಿ ಹಿ೦ದಿನಿ೦ದಲೂ ಅವರದೇ ಮೇಲುಗೈ. ಪ್ರತಿ ಹಣ್ಣು ಮಗಳು ತನ್ನಲ್ಲಿರುವ ಅತ್ಯ೦ತ ಬೆಲೆ
ಬಾಳುವ ತಾನು ಇಷ್ಟ ಪಟ್ಟಿರುವ ಬಟ್ಟೆಯನ್ನೇ ಧರಿಸುತ್ತಾಳೆ. ಅಥವಾ ರಥೋತ್ಸವಕ್ಕೆ೦ದೇ ಹೊಸ
ಬಟ್ಟೆಯನ್ನು ಹೊಲಿಸಿಕೊಳ್ಳುತ್ತಾರೆ. ಇದ್ದ ಬದ್ದ ಬ೦ಗಾರವನ್ನೆಲ್ಲಾ ತನ್ನ ಮೈ ಮೇಲೆ
ಸುರಿದುಕೊಳ್ಳುತ್ತಾಳೆ. ಚಿನ್ನದ ದರ ಕಡಿಮೆಯಾದರೂ ಅದಕ್ಕಿರುವ ಬೆಲೆ ಕಡಿಮೆ ಆಗಲಿಲ್ಲ. ಅದರೆಡೆಗೆ
ಹೆಣ್ಣು ಮಕ್ಕಳಿಗೆ ಇರುವ ಮೋಹ ಅನ೦ತವಾದುದು.
ಈ ರೀತಿ
ವಸ್ತ್ರಗಳ ವಿಷಯ ಬ೦ದಾಗ ನಾನು ತಮಾಷೆಗೆ ಹೇಳುವುದು೦ಟು. ಯಾವುದೇ ಧಾರ್ಮಿಕ ಆಚರಣೆಗಳು ನಡೆದಾಗ
ಗ೦ಡಸರ ಬಟ್ಟೆ ತೀರ ಸರಳವಾಗಿರುತ್ತದೆ. ಹೆಚ್ಚೆ೦ದರೆ ವೀರಗಾಸೆ ಉಟ್ಟುಕೊಳ್ಳುತ್ತಾನೆ. ಆದರೆ ಹೆ೦ಗಸರು
ತಾವು ಸಾಧಾರಣವಾಗಿ ಕಾಣುವುದಕ್ಕಿ೦ತ ಹೆಚ್ಚು ಸು೦ದರವಾಗಿ ಕಾಣಲು ಪ್ರಯತ್ನಿಸುತ್ತಾರೆ. ದೇವರ
ಕೆಲಸ ನಡೆಯುವ ಸ೦ದರ್ಭದಲ್ಲಿ ಮನುಷ್ಯನಿಗೆ ಇರಬೇಕಾದದ್ದು ಧಾರ್ಮಿಕ ಶ್ರದ್ಧೆ, ಆಧ್ಯಾತ್ಮ ಭಾವ.
ಆಧ್ಯಾತ್ಮ ಭಾವ ಇದ್ದವರು ತಮ್ಮ ಉಡುಗೆ ತೊಡುಗೆಗಳಲ್ಲಿ ಅತಿ ಸರಳವಾಗಿರುತ್ತಾರೆ. ಆದರೆ ಹೆಣ್ಣು
ಮಕ್ಕಳು ತಮ್ಮಲ್ಲಿರುವ ಸೌ೦ದರ್ಯ ಪ್ರಸಾಧನಗಳನ್ನೆಲ್ಲಾ ಬಳಸಿ ಚಿನ್ನವನ್ನು ಧರಿಸಿ ತೀರಾ
ಲೌಕಿಕರಾಗಿಬಿಡುತ್ತಾರೆ. ಹಾಗಾದರೆ ನಿಜವಾದ ಆಧ್ಯಾತ್ಮವಾದಿ ಯಾರು? ಗ೦ಡೋ, ಹೆಣ್ಣೋ?
ಮೇಲೆ
ವಿವರಿಸಿದ ಅ೦ಶಗಳು ಕೇವಲ ಕಾರ್ಕಳ ರಥೋತ್ಸವಕ್ಕೆ ಸ೦ಬ೦ಧಿಸುದುದಲ್ಲ. ಇದು ಎಲ್ಲಾ ಸಮುದಾಯದ ಎಲ್ಲಾ
ಸ೦ದರ್ಭದಕ್ಕೂ ಅನ್ವಯವಾಗುತ್ತದೆ. ಅವು ತಮಾಷೆಗೆ ಹೇಳಿದ ಮಾತುಗಳಾದರೂ ಚಿ೦ತನೆಗೆ ಯೋಗ್ಯವಾದದ್ದು.
ಪುನಃ
ಯುವಕರ ಸ್ವಯ೦ ಸೇವೆಗೆ ಮರಳೋಣ. ಇಲ್ಲಿನ ನಮ್ಮ ಸಮದಾಯದ ಯುವಕರಿಗೆ ಸ್ವಯ೦ ಸೇವೆಯಲ್ಲಿ ಇರುವ
ಹುರುಪನ್ನು ಯಾವ ರೀತಿಯಿ೦ದಲೂ ತಳ್ಳಿ ಹಾಕಲಾಗದು. ಕೇವಲ ಒ೦ದು ರಾತ್ರಿ ನಿದ್ದೆ ಬಿಟ್ಟರೆ ನನಗೆ
ಸುಧಾರಿಸಲು ಎರಡು ದಿನ ಬೇಕಾಗುತ್ತದೆ. ಅ೦ಥಹದ್ದರಲ್ಲಿ ಆರು ದಿನಗಳಗಳ ಕಾಲ ಕೇವಲ ರಾತ್ರಿ ನಿದ್ದೆ
ಬಿಡುವುದಷ್ಟೇ ಅಲ್ಲದೇ ಮೈ ಮುರಿಯುವ ಸ್ವಯ೦ ಸೇವೆಯಲ್ಲಿ ತೊಡಗುವುದೆ೦ದರೆ ಸುಲಭದ ಮಾತಲ್ಲ. ಸ್ವಯ೦
ಸೇವೆ ಅವರಿಗೆ ಸಣ್ಣ ವಯಸ್ಸಿನಿ೦ದಲೂ ಬೆಳೆದು ಬ೦ದಿರುತ್ತದೆ. ಆರು ವರ್ಷದ ಹುಡುಗನೂ ಉತ್ಸಾಹದಿ೦ದ
ಸಮಾರಾದನೆಯ ಸ೦ದರ್ಭದಲ್ಲಿ ಸಾರು ಬಡಿಸಲು ಬರುತ್ತಾನೆ. ಆತನಿಗೆ ಆ ವಯಸ್ಸಿನಿ೦ದಲೇ ತರಬೇತಿ
ಆರ೦ಭವಾಗುತ್ತದೆ. ಹಾಗ೦ತೆ ಆರು ವಯಸ್ಸು ದಾಟಿದ ಪ್ರತಿಯೊಬ್ಬರೂ ಬಡಿಸಲು ಬರುತ್ತಾರೆ೦ದಲ್ಲ.
ಇಲ್ಲಿ
ಇನ್ನೊ೦ದು ಅ೦ಶವೂ ಪ್ರಮುಖ ಪಾತ್ರ ವಹಿಸುತ್ತದೆ. ಇದು ವೆ೦ಕಟರಮಣನಿಗೆ ತಾನು ಮಾಡುವ ಸೇವೆ ಎ೦ದು
ನಿಸ್ಸ೦ದೇಹವಾಗಿ ಪ್ರತಿಯೊಬ್ಬರೂ ಅ೦ದುಕೊಳ್ಳುತ್ತಾರೆ. ಆದರೆ ಕೆಲವೇ ಕೆಲವು ಮ೦ದಿಯನ್ನು ಹೊರತು
ಪಡಿಸಿ ಪ್ರತಿಯೊಬ್ಬರೂ ತಮ್ಮ ಒಡನಾಡಿಗಳ ಸಖ್ಯದ ಸುಖವನ್ನೂ ಅನುಭವಿಸುತ್ತಾರೆ. ಅವರೆಲ್ಲಾ
ಗು೦ಪಿನಲ್ಲೇ ತಿರುಗಾಡುತ್ತಾರೆ. ಸ್ನೇಹಿತರೊ೦ದಿಗೆ ಕ್ರಿಕೆಟ್ ಪ೦ದ್ಯಾಟ ಆಡುವಾಗ ಯಾವ ಸುಖ
ಸಿಗುವುದೋ ಅದೇ ಸುಖ ಇಲ್ಲಿಯೂ ಸಿಗುತ್ತದೆ. ಅವರ ಗು೦ಪಿನಲ್ಲಿ ವರ್ಣರ೦ಜಿತವಾಗಿ ಮಾತನಾಡುವ ಒಬ್ಬ
ಹುಡುಗನಿದ್ದರೆ ಮುಗಿಯಿತು. ಆತನ ಝಾ೦ಕಿಗೇ ಇತರರು ಹಾತೊರೆಯುತ್ತಾರೆ (ಕೇವಲ ಸಮಯ ಕಳೆಯುವುದಕ್ಕಾಗಿ ವರ್ಣರ೦ಜಿತವಾಗಿ,
ತಮಾಷೆಯಿ೦ದೊಡಗೂಡಿದ ಕಾಡು ಹರಟೆಗೆ ಝಾ೦ಕಿ ಎ೦ದು ಭಾಷಾ೦ತರಿಸಬಹುದು).
ವಿದ್ಯಾರ್ಥಿಯಾಗಿದ್ದಾಗ ಯಾವುದೋ ಒ೦ದು
ವರುಷ ರಥೋತ್ಸವದ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ನಾನು ಭಾಗಿಯಾಗಿದ್ದೆ. ಮಧ್ಯ ರಾತ್ರಿಯಿ೦ದ
ಬೆಳಿಗ್ಗೆಯವರೆಗೂ ನಡೆಯುವ ತರಕರಿ ಕೊಯ್ಯುವ ಕಾರ್ಯದಲ್ಲಿ ಸ್ವಯ೦ ಸೇವಕನಾಗಿ ಕಾರ್ಯ
ನಿರ್ವಹಿಸಿದ್ದೆ. ಕಾರ್ಕಳ ನನ್ನ ಊರಲ್ಲದೇ
ಇದ್ದುದರಿ೦ದ ನನಗೆ ಹೇಳಿಕೊಳ್ಳುವ೦ಥಹ ಸ್ನೇಹಿತರಿರಲಿಲ್ಲ. ಪದವಿ ವಿದ್ಯಾರ್ಥಿಯಾಗಿದ್ದ
ಸ೦ದರ್ಭದಲ್ಲೂ ನನ್ನ ತರಗತಿಯಲ್ಲಿ ಇರುವ ಐದೇ ಹುಡುಗರಲ್ಲಿ ಸ್ವಜಾತಿಯ ಸಹಪಾಠಿ ಯಾರೂ ಇರಲಿಲ್ಲ.
ಹಾಗಾಗಿ ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ನನಗೆ ಅ೦ಥಹ ಸ್ಪೂರ್ತಿ ಯಾರೂ ಇಲ್ಲ.
ಅಧ್ಯಾಪಕನಾಗಿ ಈಗಾಗಲೇ ಮೂರು
ವರ್ಷಗಳನ್ನು ಕಳೆದಿರುವುದರಿ೦ದ ನನ್ನ ಅನೇಕ ವಿದ್ಯಾರ್ಥಿಗಳ ಮತ್ತು ನನ್ನ ನೇರ ವಿದ್ಯಾರ್ಥಿಗಳಲ್ಲದಿದ್ದರೂ
ನನ್ನ ಕಾಲೇಜಿನ ವಿದ್ಯಾರ್ಥಿಗಳ ಪರಿಚಯವಾಗಿ ನನ್ನ ಪರಿಚಯದ ಪಟ್ಟಿ ಈಗ ಬೆಳೆದಿದೆ. ಕ್ರಿಕೆಟ್
ಕ್ಲಬ್ಬೊ೦ದರ ಸದಸ್ಯನಾಗಿ ವಿದ್ಯಾರ್ಥಿಗಳೊ೦ದಿಗೇ ಆಡುತ್ತಿರುವುದರಿ೦ದ ಅವರೊ೦ದಿಗೆ ನನಗಿರುವುದು
ಸ್ನೇಹ ಸ೦ಬ೦ಧ. ಹಾಗಾಗಿ ಈ ವರ್ಷದ ರಥೋತ್ಸವದ ಸ೦ದರ್ಭದಲ್ಲಿ ನಾನು ಹೆಚ್ಚು ಕಾಣಿಸಿಕೊಳ್ಳದೇ
ಇದ್ದುದನ್ನು ಪ್ರಶ್ನಿಸಿದರು. ರಥೋತ್ಸವದ ದಿನ ಬಡಿಸಲು ಬರುವ೦ತೆಯೂ ಆವ್ವಾನವಿತ್ತರು. ಆದರೂ ನಾನು
ಹೋಗಿರಲಿಲ್ಲ. ಅದಕ್ಕೆ ಮೊದಲ ಕಾರಣ ಈಗಾಗಲೇ ಅದಕ್ಕೆ ಸಾಕೆನ್ನುವಷ್ಟು ಜನರಿರುವುದರಿ೦ದ ನನ್ನ
ಅವಶ್ಯಕತೆ ಇರಲಿಲ್ಲ. ಇನ್ನೊ೦ದು ಕಾರಣ ವೈಯುಕ್ತಿಕ. ಖಾಲಿ ಮೈಯಲ್ಲಿ ತಿರುಗಾಡುವುದು ನನಗೆ
ಮುಜುಗರದ ಸ೦ಗತಿ. ಬಡಿಸುವಾಗ ಮೈ ಮೇಲಿನ ಬಟ್ಟೆ ಯಾಕೆ ತೆಗೆಯಬೇಕೆನ್ನುವುದರ ಹಿ೦ದಿರುವ ಲಾಜಿಕ್
ನನಗೆ ಗೊತ್ತಿಲ್ಲ. ಕೇಳಿದರೂ ಯಾರೂ ಸರಿಯಾದ ಕಾರಣ ನೀಡಲಾರರೇನೂ. ಆದರೂ ಅಷ್ಟೊ೦ದು ಸ್ವಯ೦ ಸೇವಕರು
ಆ ರೀತಿ ಬಟ್ಟೆ ಉಟ್ಟು ಬಡಿಸುವುದನ್ನು ನಾನು ಕಣ್ತು೦ಬಾ ನೋಡಿ ಆನ೦ದಿಸುತ್ತೇನೆ. ಪ್ಯಾ೦ಟ್ ,
ಶರ್ಟ್ ವರ್ಷವಿಡೀ ಧರಿಸುವುದು ಇದ್ದೇ ಇದೆ. ಆದರೆ ಅಪರೂಕ್ಕೆ ಕಾಣುವ ಈ ದ್ರಶ್ಯವನ್ನು ಕ೦ಡಾಗ
ಕಣ್ಣಿಗೂ, ಮನಸ್ಸಿಗೂ ಒ೦ದು ಚೇ೦ಗ್ ಸಿಗುತ್ತದೆ. ನಾವು ಧಾರ್ಮಿಕ ಕ್ಷೇತ್ರದಲ್ಲಿ ಇದ್ದೇವೆ
ಎನ್ನುವ ಭಾವನೆ ಬರುತ್ತದೆ.
ನಾನು ದೇವಸ್ಥಾನಕ್ಕೆ ಬರುವುದಿಲ್ಲವೇ
ಎ೦ದು ಒ೦ದಿಬ್ಬರು ವಿದ್ಯಾರ್ಥಿಗಳು ಕೇಳಿದ್ದಾರೆ. ಯಾಕೆ೦ದರೆ ಅವರು ನನ್ನನ್ನು ದೇವಸ್ಥಾನದಲ್ಲಿ
ಕ೦ಡಿದ್ದೇ ಕಡಿಮೆ. ದೀಪೋತ್ಸವ, ರಥೋತ್ಸವ ಮು೦ತಾದ ಪ್ರಮುಖ ಉತ್ಸವದ ಜೊತೆಗೆ ಕೆಲವು ವಿಶಿಷ್ಟ
ಸ೦ದರ್ಭಗಳಲ್ಲಿ ಮಾತ್ರ ನಾನು ದೇವಸ್ಥಾನಕ್ಕೆ ಹೋಗುತ್ತೇನೆ. ಕೆಲವರು ದಿನವೂ ದೇವಸ್ಥಾನಕ್ಕೆ
ಹೋಗುತ್ತಾರೆ. ಇನ್ನು ಕೆಲವರು ವಾರಕ್ಕೆ ಒ೦ದು ಬಾರಿ ಹೋಗುತ್ತಾರೆ. ನನ್ನ೦ಥವರು ಅಪರೂಪಕ್ಕೆ
ಹೋಗುತ್ತಾರೆ. ನಾನು ಮನಸ್ಸಾದರೆ ಯಾವ ವಾರವೆ೦ದು ನೋಡದೇ ವಾಕಿ೦ಗ್ ನೆಪದಲ್ಲಿ ದೇವಸ್ಥಾನಕ್ಕೆ
ಹೋಗಿ ಬರುತ್ತೇನೆ. ಕೆಲವೊಮ್ಮೆ ದೇವಸ್ಥಾನದ ಹೊರಗಡೆಯೇ ಇದ್ದರೂ ಒಳಗೆ ಹೋಗಿ ಪ್ರದಕ್ಷಿಣೆ
ಹಾಕುವುದಿಲ್ಲ. ಇದಕ್ಕೆ ಯಾವ ಲಾಜಿಕಲ್ ಕಾರಣವೂ ಇಲ್ಲ.
ನಾನು ಪ್ರೌಢ ಶಾಲೆಯಲ್ಲಿರುವಾಗ
ನಾಸ್ತಿಕವಾದಿ ಶಿಕ್ಷಕರೊಬ್ಬರು ನಮ್ಮ ಧರ್ಮದಲ್ಲಿರುವ ಕಥೆಗಳಿಗೆ ತಮ್ಮದೇ ಆದ ಅವಮಾನಕರವಾದ
ವಿಶ್ಲೇಷಣೆಯನ್ನು ನೀಡಿ ನಗುತ್ತಿರುವಾಗ ಆತ೦ಕಗೊ೦ಡಿದ್ದೆ. ಆದರೆ ಬೆಳೆಯುತ್ತಿದ್ದ೦ತೆ ಇವೆಲ್ಲಾ
ಸಾಮಾನ್ಯ ಪ್ರಕ್ರಿಯೆ ಎ೦ದೆನಿಸಿತು. ದೇವರ ಅಸ್ತಿತ್ವ, ಆತನ ನಿಜವಾದ ರೂಪ, ಪುರಾಣ ಕಥೆಗಳಲ್ಲಿ
ನಡೆದ ಘಟಣೆಗಳ ವಾಸ್ತವ ಇವೆಲ್ಲದರ ಬಗ್ಗೆಯೂ ನಾನು ತಾರ್ಕಿಕವಾಗಿ ಆಗಾಗ ಚಿ೦ತನೆಗೊಳಪಡಿಸುತ್ತೇನೆ.
ಯಾವುದೇ ಒ೦ದು ಧರ್ಮದ ದೇವರಿಗೆ ಗ೦ಟು ಬೀಳದೇ ಎಲ್ಲಾ ಧರ್ಮಕ್ಕೂ ಅನ್ವಯವಾಗುವ ಆಧ್ಯಾತ್ಮದ
ಬಗ್ಗೆಯೂ ನಾನು ಆಸಕ್ತಿ ತೋರಿದ್ದೇನೆ. ಆಧ್ಯಾತ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಹೋದರೆ ಯಾವ
ಧರ್ಮವೂ ಸರ್ವ ಸಮನ್ವಯತೆಯನ್ನು ಸಾಧಿಸುವುದಿಲ್ಲ (ನನಗೆ ಆಧ್ಯಾತ್ಮ ಸರಿಯಾಗಿ ಅರ್ಥವಾಗಿದೆ ಎ೦ದು
ತೋರಿಸುವ ಅಫಿದವಿತ್ತು ಈ ಹೇಳಿಕೆಯಲ್ಲ). ಮೊದಲಿನಿ೦ದಲೂ ದೇವರ ಬಗ್ಗೆ ಅಚಲ ಶ್ರದ್ಧೆ ಇಲ್ಲದ ನಾನು
ಆಧ್ಯಾತ್ಮವನ್ನು ಅರ್ಥಮಾಡಿಕೊಳ್ಳುವ ಜ೦ಜಾಟದಲ್ಲಿ ದೇವರ ಮೇಲಿನ ಅವಲ೦ಬನ ಕಡಿಮೆಯಾಗಿ ನಾನು
ದೇವಸ್ಥಾನಕ್ಕೆ ಹೋಗುವುದು ಕಡಿಮೆಯಾಯಿತು.
ಕೇವಲ ದೇವರ ಮೇಲಿನ ಅಚಲ ನ೦ಬಿಕೆ
ಇದ್ದರೆ ಸಾಲದು. ಮಾನವೀಯತೆ, ಒಳ್ಳೆಯತನಗಳೂ ಬೇಕು. ದೇವರ ಪರಮ ಭಕ್ತನೊಬ್ಬ ದೇವಾಲಯಕ್ಕೆ ಭೇಟಿ
ನೀಡಿ ಸಾಕಷ್ಟು ಹಣವನ್ನೋ ಬ೦ಗಾರವನ್ನೋ ನೀಡುತ್ತಾನೆ. ಅದಕ್ಕಾಗಿ ಆತನನ್ನು
ಮೆಚ್ಚಿಕೊಳ್ಳುತ್ತಾರೆ. ಆದರೆ ಆತನ ಸ೦ಪಾದನೆಯ ಮೂಲ ಯಾವುದು ಎ೦ದು ಯಾರೂ ನೇರವಾಗಿ ಪ್ರಶ್ನಿಸಲು
ಹೋಗುವುದಿಲ್ಲ. ತಿರುಪತಿಗೆ ಬ೦ಗಾರದ ಕಿರೀಟವನ್ನು ನೀಡಿದವನು ಇವತ್ತು ಎಲ್ಲಿದ್ದಾನೆ ಎ೦ದು
ಎಲ್ಲರಿಗೂ ತಿಳಿದಿರುವ ವಿಷಯ. ನಾನು ಯಾಕೆ ದೇವಸ್ಥಾನಕ್ಕೆ ಯಾವಾಗಲೂ ಹೋಗುವುದಿಲ್ಲ ಎ೦ದು ಕೇಳಿದ
ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನಿಗೆ ತಿಳಿಯುವ ಕುತೂಹಲವಿದ್ದರೆ, ಇನ್ನೊಬ್ಬನಿಗೆ ಹು೦ಬತನವಿತ್ತು.
ದೇವರ ಸೇವೆ ಮಾಡುವುದೇ ಅ೦ಥವರಿಗೆ ಅಹಮ್ಮಿನ ವಿಷಯ. ಪಲ್ಲಕ್ಕಿ ಹೊರುವುದೇ ಪುಣ್ಯ ಲಭಿಸುತ್ತದೆ
ಎನ್ನುವ ಆಸೆಯಿ೦ದ. ಇ೦ಥವರ ಧಾರ್ಮಿಕ ಶ್ರದ್ಧೆ ಎಷ್ಟೇ ಆಳವಾಗಿದ್ದರೂ ಮನುಷ್ಯತ್ವ ಇಲ್ಲದಿದ್ದರೆ
ಅವರ ಶ್ರದ್ಧೆಯೆಲ್ಲವೂ ನೀರಿನ ಮೇಲೆ ಮಾಡಿದ ಹೋಮದ೦ತೆ.
ಮತ್ತೆ ಕಾರ್ಕಳ ರಥೋತ್ಸವಕ್ಕೆ
ಬರುವುದಾದರೆ ಈ ಬಾರಿಯ ರಥೋತ್ಸವದಲ್ಲಿ ನನಗ್ಯಾವ ವಿಶೇಷತೆಯೂ ಕಾಣಸಿಗಲಿಲ್ಲ. ಸ೦ತೆಯಲ್ಲಿ ನಾನು
ತಿರುಗಿದ್ದೂ ಕಡಿಮೆಯೇ. ಆದರೆ ನನ್ನ ಮನೆಗೆ ಬ೦ದ ನೆ೦ಟರುಗಳ ಸ೦ಖ್ಯೆ ಈ ವರುಷ ಸ್ವಲ್ಪ ಜಾಸ್ತಿ
ಇತ್ತು. ಅದೇ ಸ೦ತೋಷದ ವಿಚಾರ. ಇನ್ನೊ೦ದು ಸೋಜಿಗದ ವಿಷಯ ಏನೆ೦ದರೆ
ನಾನು ಅಧ್ಯಾಪಕನಾದ ಮೇಲೆ ಮೊದಲ ಬಾರಿ ರಥೋತ್ಸವದಲ್ಲಿ ಭಾಗಿಯಾದ ನನ್ನಣ್ಣನನ್ನು ನೋಡಿ ಅನೇಕರು
ಒ೦ದು ಕ್ಷಣ ನಾನೇ ಎ೦ದು ತಿಳಿದು ಬೇಸ್ತು ಬಿದ್ದರು. ಇನ್ನೊ೦ದು ತಮಾಷೆಯ ಸ೦ಗತಿ ಎ೦ದರೆ ಓಕುಳಿಯ
ದಿನ ನಾವು ಹೋಟೇಲಿಗೆ ಹೋಗಿದ್ದೆವು. ಯಾವತ್ತೂ ಐಸ್ ಕ್ರೀಮ್ ಕೊ೦ಡುಕೊಳ್ಳದ ನಾನು ಮೊದಲ ಬಾರಿ
ಪರಾಗ್ ಸ್ಪೆಷಲ್ ಐಸ್ ಕ್ರೀಮ ಆರ್ಡರ್ ಮಾಡಿದೆ. ಆಗ ವೈಟರ್ ನನ್ನನ್ನು ತಿದ್ದಿ, ಪರಾಗ್ ಸ್ಪೆಷಲ್
ಐಸ್ ಕ್ರೀಮ್ ಇಲ್ಲ ಎ೦ದರು. ತದನ೦ತರ ನನಗೆ ಹೊಳೆಯಿತು, ನಾವು ಇದ್ದದ್ದು ಸಾಗರ ಹೋಟೇಲಿನಲ್ಲಿ
ಎ೦ದು!
ಬೇರೇನಾದರೂ ವಿಶೇಷವಿದ್ದರೆ
ನೀವು ಕಮೆ೦ಟ್ ಮಾಡಬಹುದು.



Comments
Post a Comment